More

  10 ಹೊಸಮುಖ 8 ಹಾಲಿಗಳಿಗೆ ಶಾಕ್; ಬೆಂ. ಉತ್ತರಕ್ಕೆ ಶೋಭಾ, ಕಟೀಲ್ ಜಾಗಕ್ಕೆ ಕ್ಯಾಪ್ಟನ್

  ರಾಘವ ಶರ್ಮ ನಿಡ್ಲೆ ನವದೆಹಲಿ
  ಲೋಕಸಭೆ ಚುನಾವಣೆಯ 2ನೇ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಘೊಷಿಸಿರುವ ಬಿಜೆಪಿ, ಕರ್ನಾಟಕದ 20 ಸೀಟುಗಳನ್ನು ಅಂತಿಮಗೊಳಿಸಿದೆ. ನಿರೀಕ್ಷೆಯಂತೆ ಭರ್ಜರಿ ಸರ್ಜರಿ ನಡೆಸಿರುವ ವರಿಷ್ಠರು 20 ಸೀಟುಗಳ ಪೈಕಿ 10 ಕ್ಷೇತ್ರಗಳಿಗೆ ಹೊಸ ಮುಖ ಪರಿಚಯಿಸಿದ್ದಾರೆ. 8 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದ್ದರೆ, ಶೋಭಾ ಕರಂದ್ಲಾಜೆಗೆ ಉಡುಪಿ ಚಿಕ್ಕಮಗಳೂರು ಬದಲು ಬೆಂಗಳೂರು ಉತ್ತರ ಕ್ಷೇತ್ರ ಕೊಡಲಾಗಿದೆ. ಅದೇ ರೀತಿ ದಾವಣಗೆರೆ ಟಿಕೆಟ್ ಸಿದ್ದೇಶ್ವರ್ ಕೈತಪ್ಪಿದರೂ ಅವರ ಕುಟುಂಬಕ್ಕೆ ಸಿಕ್ಕಿದೆ. ಜಾತಿ ಸಮೀಕರಣ, ಸ್ಥಳೀಯ ಲೆಕ್ಕಾಚಾರ ಸೇರಿ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡಲಾಗಿದೆ.

  ಜೋಶಿಗೆ ಟಿಕೆಟ್: ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರಲ್ಲಿ ಪ್ರಲ್ಹಾದ ಜೋಶಿ ಹುಬ್ಬಳ್ಳಿ-ಧಾರವಾಡ ಮತ್ತು ಭಗವಂತ ಖೂಬಾ ಬೀದರ್ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ. ಬೀದರ್​ನಲ್ಲಿ ಬಿಜೆಪಿ ಶಾಸಕರು, ಮುಖಂಡರಿಂದ ಭಾರೀ ವಿರೋಧ ಎದುರಿಸಿದರೂ, ಭಗವಂತ ಖುಬಾಗೇ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ. ಪಕ್ಷದೊಳಗಿನ ವಿರೋಧದ ನಡುವೆ ದೆಹಲಿಯಲ್ಲಿ ಬಿಜೆಪಿ ನಾಯಕರ ಮನೆಗಳಿಗೆ ಎಡತಾಕುತ್ತಾ, ದೆಹಲಿಗೆ ಬಂದಿದ್ದ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ಖೂಬಾ, ಟಿಕೆಟ್​ಗಾಗಿ ಸಾಕಷ್ಟು ಸರ್ಕಸ್ ನಡೆಸಿದ್ದರು. ಕೊನೆಗೂ ಅವರ ಬೇಡಿಕೆ ಈಡೇರಿದೆ. ಆದರೆ, ಸ್ಥಳೀಯ ನಾಯಕರ ಸಹಕಾರ ಸಿಗಲಿದೆಯೇ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

  ಕಟೀಲ್​ಗೆ ಆಘಾತ: ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್​ಗೆ ದಕ್ಷಿಣ ಕನ್ನಡ ಟಿಕೆಟ್ ತಪ್ಪಿರುವುದು ಮಹತ್ವದ ಬೆಳವಣಿಗೆ. ಬಂಟ ಸಮುದಾಯದ ಕಟೀಲ್ ಬದಲಿಗೆ ಅದೇ ಸಮುದಾಯದ ಕ್ಯಾಪ್ಟನ್ ಬೃಜೇಶ್ ಚೌಟರಿಗೆ ಮಣೆ ಹಾಕಲಾಗಿದೆ. ಬೃಜೇಶ್ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರು ಮತ್ತು ಜಿಲ್ಲೆಯಲ್ಲಿ ಯುವ ನಾಯಕರಾಗಿ ಪ್ರಸಿದ್ಧಿ ಗಳಿಸುತ್ತಿದ್ದರೆ. ದಕ್ಷಿಣ ಕನ್ನಡದಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿ, ಆದರೆ ಕಟೀಲ್​ಗೆ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆದಿದ್ದವು. ಮೇಲಾಗಿ, ಕಟೀಲ್​ಗೆ ಟಿಕೆಟ್ ಕೊಟ್ಟರೆ ಬಂಡಾಯ ಅಭ್ಯರ್ಥಿಯಾಗಿ, ತಾವು ಸ್ಪರ್ಧೆ ಮಾಡುವುದಾಗಿ ಅರುಣ್ ಕುಮಾರ್ ಪುತ್ತಿಲ ಬೆದರಿಕೆ ಹಾಕಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕಮಾಂಡ್, ರಾಜ್ಯ ನಾಯಕರ ಸಲಹೆಯಂತೆ ಚೌಟರಿಗೆ ಅವಕಾಶ ನೀಡಿದೆ.

  ಶೋಭಾ ಕ್ಷೇತ್ರ ಬದಲು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಳುಹಿಸಲು ವರಿಷ್ಠರು ತೀರ್ವನಿಸಿದ್ದಾರೆ. ಇಲ್ಲಿ ಶೋಭಾ ವಿರೋಧಿ ಅಲೆ ದಿನೇದಿನೇ ಹೆಚ್ಚಿದ್ದರಿಂದ ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಚುನಾವಣಾ ರಾಜಕೀಯದಿಂದ ನಿವೃತ್ತಿ ಘೊಷಿಸಿದ ಬೆನ್ನಲ್ಲೇ ಶೋಭಾಗೆ ಟಿಕೆಟ್ ಘೊಷಿಸಲಾಗಿದೆ. ಡಿವಿಎಸ್, ಶೋಭಾ ಇಬ್ಬರೂ ಈ ಕ್ಷೇತ್ರಕ್ಕೆ ವಲಸಿಗರು. ಆದರೆ, ಶೋಭಾ ಮಟ್ಟಿಗೆ ಇದು ಸುರಕ್ಷಿತ ಕ್ಷೇತ್ರ ಎಂದೇ ವಿಶ್ಲೇಷಿಸಲಾಗಿದೆ. ಸೌಮ್ಯ ಸ್ವಭಾವದ ಕೋಟಾಗೆ ಉಡುಪಿ-ಚಿಕ್ಕಮಗಳೂರು ಮತದಾರರು ಬೆಂಬಲಿಸಬಹುದು ಎಂಬ ನಂಬಿಕೆ ಬಿಜೆಪಿಯದ್ದು.

  BJP List

  ಒಡೆಯರ್​ಗೆ ಮಣೆ: ನಿರೀಕ್ಷೆಯಂತೆ ಮೈಸೂರು ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡದಿರಲು ವರಿಷ್ಠರು ನಿರ್ಧರಿಸಿದ್ದು, ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್​ಗೆ ಟಿಕೆಟ್ ನೀಡಲಾಗಿದೆ. ಅರಸು ಮನೆತನಕ್ಕೆ ರಾಜಕೀಯ ಹೊಸತಲ್ಲ. ಈ ಹಿಂದೆ ಶ್ರೀಕಂಠದತ್ತ ಒಡೆಯರ್ ಅವರು ಕಾಂಗ್ರೆಸ್ ಪಕ್ಷದಿಂದ ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಅದೇ ಕುಟುಂಬದ ಯದುವೀರ್ ಬಿಜೆಪಿಯಿಂದ ಸಂಸತ್ ಪ್ರವೇಶಿಸುವ ಯತ್ನ ಮಾಡಲಿದ್ದಾರೆ. ಸ್ಥಳೀಯ ಮುಖಂಡರ ಜತೆಗಿನ ವೈಮನಸ್ಯ, ಕಾರ್ಯಕರ್ತರು, ಶಾಸಕರ ವಿರೋಧ, ಪಕ್ಷ ಸಂಘಟನೆಗೆ ಕೊಡುಗೆ ನೀಡಿಲ್ಲ ಎಂಬ ಕಾರಣಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ ಎನ್ನಲಾಗಿದೆ. ಆದರೆ, ಸಂಸದರಾಗಿ ಅವರ ಕೆಲಸಗಳ ಬಗ್ಗೆ ಯಾರೂ ಆಕ್ಷೇಪ ತೆಗೆದಿಲ್ಲ ಎನ್ನುವುದೂ ಇಲ್ಲಿ ಗಮನಾರ್ಹ.

  ಬೊಮ್ಮಾಯಿಗೆ ಟಿಕೆಟ್: ಹಾವೇರಿ ಕ್ಷೇತ್ರದಲ್ಲಿ ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಅವರ ಆಪ್ತ ಸ್ನೇಹಿತ, ಮಾಜಿ ಸಿಎಂ ಬಸವರಾಜ ಬೊಮ್ಮಯಿಗೆ ಟಿಕೆಟ್ ನೀಡಲಾಗಿದೆ. ಬೊಮ್ಮಾಯಿ ಸದ್ಯ ಶಿಗ್ಗಾಂವ್ ಶಾಸಕರಾಗಿದ್ದು, ಒಂದು ವೇಳೆ ಲೋಕಸಭೆ ಚುನಾವಣೆ ಗೆದ್ದರೆ ಶಾಸಕ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಹಾವೇರಿ ಕ್ಷೇತ್ರದ ಮೇಲೆ ಜಗದೀಶ್ ಶೆಟ್ಟರ್ ಕೂಡ ಕಣ್ಣಿಟ್ಟಿದ್ದರು. ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಇದೆ.

  ಚಾಮರಾಜನಗರ ಕ್ಷೇತ್ರದಿಂದ ಎಸ್. ಬಾಲರಾಜ್ ಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಮೂಲಕ ರಾಜಕಾರಣಕ್ಕೆ ಬಂದಿದ್ದ ಬಾಲರಾಜ್, ಕೊಳ್ಳೇಗಾಲದಿಂದ ಪಕ್ಷೇತರ ಶಾಸಕರಾಗಿದ್ದರು. ನಂತರ ಬಿಜೆಪಿ, ಕೆಜೆಪಿ ಕೂಡ ಸೇರಿದ್ದರು. ಮತ್ತೆ ಕಾಂಗ್ರೆಸ್ ಸೇರಿದ್ದ ಅವರು, ಕಳೆದ ವಿಧಾನಸಭೆ ಚುನಾವಣಿಯಲ್ಲಿ ಬಿಜೆಪಿಗೆ ವಾಪಸಾಗಿದ್ದರು. ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ಸಿಕ್ಕಿದೆ.

  ಸೋಮಣ್ಣ ನಿರಾಳ: ಮಾಜಿ ಸಚಿವ ವಿ ಸೋಮಣ್ಣಗೆ ಕೊನೆಗೂ ತುಮಕೂರು ಟಿಕೆಟ್ ಸಿಕ್ಕಿದೆ. ವಿಧಾನಸಭೆ ಚುನಾವಣೆಗೆ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಸೋಮ್ಮಣ್ಣಗೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಲೋಕಸಭೆ ಸ್ಪರ್ಧೆ ಅನಿವಾರ್ಯವಾಗಿತ್ತು. ರಾಜ್ಯಸಭೆ ಸೀಟು ಕೊಡಿ ಎಂಬ ಅವರ ಬೇಡಿಕೆಗೆ ಹೈಕಮಾಂಡ್ ಒಪ್ಪಿರಲಿಲ್ಲ. ಇದಕ್ಕೂ ಮುನ್ನ ಮಾಜಿ ಸಚಿವ ಸಿಟಿ ರವಿ ಅವರಲ್ಲಿ ನೀವು ಬೆಂ.ಗ್ರಾಮೀಣದಿಂದ ಸ್ಪರ್ಧಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ರ್ಚಚಿಸಿದ್ದರು. ಆದರೆ, ಕೊಡುವುದಾದರೆ ಬೆಂ.ಉತ್ತರ ಅಥವಾ ಉಡುಪಿ-ಚಿಕ್ಕಮಗಳೂರು ಸೀಟು ಕೊಡಿ. ಇಲ್ಲವಾದರೆ ನನಗೆ ಟಿಕೆಟ್ ಬೇಡ ಎಂದು ಸ್ಪಷ್ಟಪಡಿಸಿದ್ದರು.

  ದಾವಣಗೆರೆ ಕ್ಷೇತ್ರದಲ್ಲಿ 4 ಬಾರಿ ಸಂಸದರಾಗಿದ್ದ ಜಿಎಂ ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್​ಗೆ ಟಿಕೆಟ್ ಸಿಕ್ಕಿದೆ. ಸಿದ್ದೇಶ್ವರ್ ಅಥವಾ ಕುಟುಂಬ ಬಿಟ್ಟು ಹೊಸಬರಿಗೆ ಅವಕಾಶ ಕೊಡಿ ಎಂದು ಸ್ಥಳೀಯ ಬಿಜೆಪಿ ಮುಖಂಡರು ಒತ್ತಡ ಹೇರಿದ್ದರೂ, ರಾಜ್ಯ ಘಟಕದ ಆಶಯದಂತೆ ಮತ್ತೆ ಸಿದ್ದೇಶ್ವರ್ ಕುಟುಂಬಕ್ಕೆ ಮಣೆ ಹಾಕಲಾಗಿದೆ. ಕಾಂಗ್ರೆಸ್​ನಿಂದ ಸಚಿವ ಎಸ್​ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್​ಗೆ ಟಿಕೆಟ್ ನೀಡುವ ಚರ್ಚೆಗಳಿದ್ದು, ಅದೇ ಕಾರಣಕ್ಕೆ ಮಹಿಳಾ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡಿದೆ.

  ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಬದಲಿಗೆ ಲಿಂಗಾಯತ ಸಮುದಾಯದ ಡಾ. ಬಸವರಾಜ ಕ್ಯಾವಟೂರ್​ಗೆ ಅದೃಷ್ಟ ಒಲಿದಿದೆ. ಮೂಳೆ ತಜ್ಞರಾಗಿರುವ ಡಾ. ಬಸವರಾಜ್, ಮಾಜಿ ಶಾಸಕ ಕೆ. ಶರಣಪ್ಪ ಅವರ ಪುತ್ರ. ಅಮಿತ್ ಷಾ ಕುಟುಂಬದ ವೈದ್ಯರೊಬ್ಬರ ಸಹಪಾಠಿ. ಸಂಗಣ್ಣ ಕರಡಿ ಸ್ಥಳೀಯ ಕಾರ್ಯಕರ್ತರ ವಿರೋಧ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಹೊಸ ಮುಖವನ್ನು ಆಯ್ಕೆ ಮಾಡಲಾಗಿದೆ. ಡಾ. ಬಸವರಾಜ್ 2019ರ ಲೋಕಸಭೆ ಮತ್ತು ಕಳೆದ ವಿಧಾನಸಭೆ ಚುನಾವಣೆಗೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಉಳಿದಂತೆ, ಚಿಕ್ಕೋಡಿಗೆ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ವಿಜಯಪುರಕ್ಕೆ ರಮೇಶ್ ಜಿಗಜಿಣಗಿ, ಬೆಂಗಳೂರು ಸೆಂಟ್ರಲ್ ಗೆ ಪಿಸಿ ಮೋಹನ್, ಬೆಂ. ದಕ್ಷಿಣಕ್ಕೆ ತೇಜಸ್ವಿ ಸೂರ್ಯ, ಬಾಗಲಕೋಟೆಗೆ ಪಿಸಿ ಗದ್ದಿಗೌಡರ್, ಕಲಬುರಗಿಗೆ ಡಾ. ಉಮೇಶ್ ಜಾಧವ್​ಗೆ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.

  BJP List

  ಈಶ್ವರಪ್ಪ ಅಸಮಾಧಾನ: ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರಗೆ ಮತ್ತೆ ಟಿಕೆಟ್ ಸಿಕ್ಕಿದೆ. ಹಾವೇರಿ ಕ್ಷೇತ್ರಕ್ಕೆ ತಮ್ಮ ಪುತ್ರನ ಹೆಸರನ್ನು ಪರಿಗಣಿಸಿಲ್ಲ ಎಂದು ಆಕ್ರೋಶಗೊಂಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ. ಮಾ.15ಕ್ಕೆ ಸಭೆ ನಡೆಸಲಿದ್ದಾರೆ. ಯಡಿಯೂರಪ್ಪ ಮಕ್ಕಳ ಭವಿಷ್ಯಕ್ಕೆ ಹೋರಾಟ ಮಾಡುತ್ತಾರೆ ಎನ್ನುವುದಾದರೆ, ನಾನೇಕೆ ಮಾಡಬಾರದು ಎನ್ನುವುದು ಈಶ್ವರಪ್ಪ ಪ್ರಶ್ನೆ.

  ಹೃದಯವಂತನಿಗೆ ಒಲಿದ ಟಿಕೆಟ್: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಲಕ್ಷಾಂತರ ಜನರ ಜೀವ ಉಳಿಸಿರುವ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್​ಅವರಿಗೆ ಒಲಿದಿದೆ. ಡಿ.ಕೆ.ಸುರೇಶ್​ಗೆ ಸವಾಲೊಡ್ಡಲು ನೀವೇ ಸೂಕ್ತ ಅಭ್ಯರ್ಥಿ ಎಂಬ ಭರವಸೆ ನೀಡಿ ಬಿಜೆಪಿ ಹೈಕಮಾಂಡ್ ಚುನಾವಣಾ ಕಣಕ್ಕಿಳಿಸಿದೆ.

  21 ಕೈ ಅಭ್ಯರ್ಥಿಗಳು ಅಂತಿಮ: 21 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಕೊನೇ ಕ್ಷಣದಲ್ಲಿ ಕೆಲವು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ. 20 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಾತಿ ಸಮೀಕರಣ ನೋಡಿಕೊಂಡು ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್​ಗೆ ಅವಕಾಶ ಸಿಕ್ಕಂತಾಗಿದೆ. ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪುತ್ರಿ ಸೌಮ್ಯಾರೆಡ್ಡಿಯೇ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

  ಬಿಎಸ್​ವೈ ಮೇಲುಗೈ: ಲೋಕಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿ.ಎಲ್. ಸಂತೋಷ್ ಮೇಲುಗೈ ಸಾಧಿಸಿದ್ದರೆ, ಬಿ.ಎಸ್.ಯಡಿಯೂರಪ್ಪ ತೀವ್ರ ಮುಜುಗರ ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಸಂತೋಷ್ ಅವರ ಕಟ್ಟಾ ಬೆಂಬಲಿಗರಾಗಿದ್ದ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಪ್ರತಾಪಸಿಂಹ ಅವರುಗಳಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದೆ ಇರುವುದು ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕೊನೇ ಕ್ಷಣದಲ್ಲಿ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಅವರ ಗ್ರೀನ್​ಸಿಗ್ನಲ್ ಕಾರಣ ಎಂದು ಹೇಳಲಾಗುತ್ತಿದೆ.

  ಯಾರಿಗೆಲ್ಲ ಟಿಕೆಟ್ ಮಿಸ್

  • ಡಿ.ವಿ.ಸದಾನಂದಗೌಡ-ಬೆಂ.ಉತ್ತರ
  • ನಳಿನ್ ಕುಮಾರ್ ಕಟೀಲ್-ದ.ಕನ್ನಡ
  • ಪ್ರತಾಪ್ ಸಿಂಹ-ಮೈಸೂರು-ಕೊಡಗು
  • ಶಿವಕುಮಾರ್ ಉದಾಸಿ- ಹಾವೇರಿ
  • ದೇವೇಂದ್ರಪ್ಪ -ಬಳ್ಳಾರಿ
  • ಜಿ.ಎಸ್.ಬಸವರಾಜು-ತುಮಕೂರು
  • ಜಿ.ಎಂ.ಸಿದ್ದೇಶ್ವರ್-ದಾವಣಗೆರೆ
  • ಶ್ರೀನಿವಾಸ ಪ್ರಸಾದ್ -ಚಾಮರಾಜನಗರ

  ಯಾವ ಕ್ಷೇತ್ರಗಳು ಬಾಕಿ?

  • ಉತ್ತರ ಕನ್ನಡ
  • ಬೆಳಗಾವಿ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ರಾಯಚೂರು
  • ಹಾಸನ
  • ಮಂಡ್ಯ
  • ಕೋಲಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts