ಕ್ವಾರಂಟೈನ್​ ಕೇಂದ್ರದಲ್ಲಿ ಕೊನೆಯುಸಿರಳೆಯಿತು 10 ತಿಂಗಳ ಹಸುಗೂಸು: ಉತ್ತರ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ

toddler foot 13 APR 20
Published on

ಲಖನೌ: ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಚೌರಾಸಿ ಗ್ರಾಮದ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ 10 ತಿಂಗಳ ಹಸುಗೂಸು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

ಪುಟಾಣಿ ಹೆಣ್ಮುಗುವಿನ ತಂದೆ ರಾಜೇಂದ್ರ ಪ್ರಸಾದ್ ಹೇಳುವ ಪ್ರಕಾರ, ಮಗುವಿಗೆ ಗುರುವಾರ ಸಂಜೆ ಅನಾರೋಗ್ಯ ಕಾಡಿತ್ತು. ಅಲ್ಲದೆ, ಶುಕ್ರವಾರ ಮೈ ಮೇಲೆಲ್ಲ ದಡಾರದಂತಹ ಲಕ್ಷಣಗಳು ಗೋಚರಿಸಿದ್ದವು. ಶನಿವಾರ ಮಗು ಕೊನೆಯುಸಿರೆಳದಿದೆ. ರಾಜ್ಯದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಮಗುವೊಂದು ಮೃತಪಟ್ಟ ಘಟನೆ ಇದೇ ಮೊದಲನೆಯದು.

ಕ್ವಾರಂಟೈನ್ ಕೇಂದ್ರದ ಮೂಲಗಳ ಪ್ರಕಾರ, ಮಗುವಿಗೆ ಅನಾರೋಗ್ಯ ಕಾಡಿದ ಕೂಡಲೇ ಆಕೆಯನ್ನು ಉಸ್ಕಾ ಬಜಾರ್ ಪ್ರದೇಶದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಶನಿವಾರ ಆಕೆಯ ಮೃತದೇಹ ವಾಪಸ್ ಬಂದಿದೆ. ಕೊನೆಗೆ ಗ್ರಾಮಕ್ಕೆ ಹೋದ ಕುಟುಂಬಸ್ಥರು ಅಲ್ಲೇ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಜಿಲ್ಲಾಧಿಕಾರಿ ದೀಪಕ್ ಮೀನಾ ಅವರು ಹೇಳುವ ಪ್ರಕಾರ, ಈ ಕುಟುಂಬ ಮುಂಬೈನಿಂದ ಮಾರ್ಚ್​ 29ಕ್ಕೆ ಗ್ರಾಮಕ್ಕೆ ಆಗಮಿಸಿತ್ತು. ಅಂದಿನಿಂದಲೇ ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರುವಂತೆ ಸೂಚಿಸಲಾಗಿತ್ತು. ಅವರ ಕ್ವಾರಂಟೈನ್ ಅವಧಿ ಶನಿವಾರ ಮುಗಿಯುವುದಿತ್ತು. ಅಷ್ಟರಲ್ಲಿ ಈ ರೀತಿ ಆಗಿದೆ.

ಉತ್ತರ ಪ್ರದೇಶದಲ್ಲಿ ಇದುವರೆಗೆ ಕರೊನಾ ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ- ಈ ಪೈಕಿ ಗೋರಖಪುರದ ಬಸ್ತಿ, ಮೇರಠ್​, ವಾರಾಣಸಿ, ಆಗ್ರಾ, ಬುಲಂದಶಹರ್​ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net