

ಲಖನೌ: ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) 10 ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್, ಶುಕ್ರವಾರ ರಾತ್ರಿ 10:35ರ ಸುಮಾರಿಗೆ ದುರಂತ ಸಂಭವಿಸಿದ್ದು, ಈವರೆಗೂ 37 ಶಿಶುಗಳನ್ನು ರಕ್ಷಿಸಲಾಗಿದೆ. ಆಸ್ಪತ್ರೆಯಲ್ಲಿರುವ ಎರಡು ಮಕ್ಕಳ ವಾರ್ಡ್ ಪೈಕಿ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, 10 ಮಕ್ಕಳು ಮೃತಪಟ್ಟಿದ್ದಾರೆ. ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಉತ್ತರಪ್ರದೇಶ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಘಟನೆ ನಡೆದ ವೇಳೆ 54 ಮಕ್ಕಳು ಆಸ್ಪತ್ರೆತಯಲ್ಲಿ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. 44 ಮಕ್ಕಳನ್ನು ರಕ್ಷಿಸಲಾಗಿದ್ದು, ಮೃತಪಟ್ಟ 10 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ ಏಳು ಮಕ್ಕಳ ಗುರುತು ಪತ್ತೆಯಾಗಿದ್ದು, ಅವಘಡಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಝಾನ್ಸಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಎನ್ಐಸಿಯುನಲ್ಲಿ ಸಂಭವಿಸಿದ ಅವಘಡದಲ್ಲಿ ಮಕ್ಕಳ ಸಾವು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಅಗಲಿದ ಆತ್ಮಗಳಿಗೆ ಮೋಕ್ಷ ಮತ್ತು ಗಾಯಾಳುಗಳಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಭಗವಂತ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.