ಅಕ್ಷಯ್ ಕುಮಾರ್​ ಚಿತ್ರ ಕೇಳೋರಿಲ್ಲ..!

Akshay
Published on

ಅಕ್ಷಯ್ ಕುಮಾರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಟೀಸರ್ ಮತ್ತು ಟ್ರೇಲರ್​ಗೆ ಸಿಕ್ಕ ಪ್ರತಿಕ್ರಿಯೆ ನೋಡಿದರೆ, ಚಿತ್ರ ದೊಡ್ಡ ಹಿಟ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೇಲಂತೂ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಯಿತು. ಆದರೆ, ಅವೆಲ್ಲವೂ ಇದೀಗ ಸುಳ್ಳಾಗಿದೆ.

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವು ಶುಕ್ರವಾರ (ಜೂನ್ 03) ಬಿಡುಗಡೆಯಾಗಿತ್ತು. ಚಿತ್ರದ ಮೊದಲ ದಿನದ ಕಲೆಕ್ಷನ್ 10.70 ಕೋಟಿ ರೂ. ಆಗಿತ್ತು. ಹಾಗೆ ನೋಡಿದರೆ, ಅಕ್ಷಯ್ ಅಭಿನಯದ ಇತ್ತೀಚಿನ ಚಿತ್ರಗಳಲ್ಲೇ ಇದು ಕಡಿಮೆ ಕಲೆಕ್ಷನ್ ಎಂದು ಹೇಳಬಹುದು. ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಅಭಿನಯದ ಚಿತ್ರಗಳ ಮೊದಲ ದಿನದ ಕಲೆಕ್ಷನ್ ಇಡೀ ದೇಶದಲ್ಲಿ 15ರಿಂದ 22 ಕೋಟಿ ರೂ.ಗಳಷ್ಟಾಗುತ್ತಿತ್ತು. ಆದರೆ, ‘ಸಾಮ್ರಾಟ್ ಪೃಥ್ವಿರಾಜ್’ ಪ್ರಾರಂಭವಾಗಿದ್ದೇ 10 ಕೋಟಿ 70 ಲಕ್ಷದಿಂದ.

ಶನಿವಾರ ಮತ್ತು ಭಾನುವಾರ ಕ್ರಮೇಣ ಕಲೆಕ್ಷನ್ ಹೆಚ್ಚಾಗಿ ಚಿತ್ರತಂಡದವರಲ್ಲಿ ಸಂತಸ ಹೆಚ್ಚಾಯಿತು. ಆದರೆ, ಸೋಮವಾರ ಮತ್ತೆ ಕಲೆಕ್ಷನ್ ಬಿದ್ದು ಹೋಯಿತು. ಆ ನಂತರ ಎಷ್ಟೋ ಕಡೆ ಜನ ಇಲ್ಲದೆ ಪ್ರದರ್ಶನಗಳು ರದ್ದಾಗಿದ್ದು ಸಹ ಸುದ್ದಿಯಾಗಿತ್ತು. ಒಟ್ಟಾರೆ, ಬಿಡುಗಡೆಯಾದ ಒಂದು ವಾರದಲ್ಲಿ ಚಿತ್ರವು 55 ಕೋಟಿ ರೂ. ಸಂಪಾದಿಸಿದ್ದು, ಇದು ಸಹ ‘ಬಚ್ಚನ್ ಪಾಂಡೆ’ ಮತ್ತು ‘ಬೆಲ್ ಬಾಟಂ’ ಚಿತ್ರಗಳ ತರಹ ಫ್ಲಾಪ್​ಗಳ ಪಟ್ಟಿಗೆ ಸೇರಲಿದೆ ಎಂದು ಹೇಳಲಾಗುತ್ತಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net