ಈ ಔಷಧಕ್ಕಿದೆಯಂತೆ ಕರೊನಾ ಗುಣಪಡಿಸುವ ಶಕ್ತಿ...!

Corona vaccine- Zydus
Published on

ನವದೆಹಲಿ: ಕೋವಿಡ್​-19 ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಅವಕಾಶ ನೀಡುವಂತೆ ಕೋರಿ ದೇಶದ ಮತ್ತೊಂದು ಪ್ರತಿಷ್ಠಿತ ಔಷಧ ತಯಾರಿಕಾ ಕಂಪನಿ ಅನುಮತಿ ಕೋರಿದೆ.

ಭಾರತೀಯ ಔಷಧ ಮಹಾನಿಯಂತ್ರಕರಿಗೆ ಪತ್ರವೊಂದನ್ನು ಬರೆಯಲಾಗಿದ್ದು, ಕರೊನಾ ಸೋಂಕಿತರ ಮೇಲೆ ಕ್ಲಿನಿಕಲ್ ಟ್ರಯಲ್​ ನಡೆಸಲು ಪರವಾನಗಿ ನೀಡಬೇಕೆಂದು ಗುಜರಾತ್​ನ ಅಹಮದಾಬಾದ್​ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಕ್ಯಾಡಿಲಾ ಹೆಲ್ತ್​ಕೇರ್​ ಮನವಿ ಮಾಡಿದೆ.

ಈ ಕಂಪನಿ ಹೆಪಟೈಟಿಸ್​- ಬಿ ಹಾಗೂ ಹೆಪಟೈಟಿಸ್​- ಸಿ ಕಾಯಿಲೆಗೆಂದೇ ಪೆಗಿಲೆಟೆಡ್​ ಇಂಟರ್​ಫೆರೊನ್​ ಅಲ್ಫಾ2ಬಿ (ಪೆಗಿಹೆಪ್​)ಎಂಬ ಔಷಧವನ್ನು ತಯಾರಿಸಿದೆ. ಇದೇ ಔಷಧವನ್ನು ಚೀನಾ ಹಾಗೂ ಕ್ಯೂಬಾದಲ್ಲಿ ಕೋವಿಡ್​-19 ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ. ಇದಕ್ಕಿಂತಲೂ ಮುಖ್ಯವಾದ ಅಂಶವೆಂದರೆ, ಕರೊನಾ ಸೋಂಕಿತರಿಗೆ ನೀಡಲಾಗುವ ಚಿಕಿತ್ಸಾ ಕೈಪಿಡಿಯಲ್ಲಿ ಈ ಔಷಧವನ್ನು ಶಿಫಾರಸು ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದಲ್ಲದೇ, ಕರೊನಾ ರೋಗಿಗಳು ಗುಣಮುಖರಾಗಲು ಈ ಔಷಧದ ಪಾತ್ರ ಕುರಿತಂತೆ ಪರಿಶೀಲನೆ ನಡೆಸಬೇಕೆಂದು ಝೈಡಸ್​ ಕ್ಯಾಡಿಲಾ ಕಂಪನಿಯು ಕೇಂದ್ರ ಜೈವಿಕ ತಂತ್ರಜ್ಞನ ಇಲಾಖೆಯನ್ನು ಕೋರಿಕೊಂಡಿದೆ. ಈ ಬಗ್ಗೆ ಮಾತುಕತೆಗಳು ನಡೆದಿದ್ದು, ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್​-19 ರೋಗಿಗಳ ಕರೊನಾ ವೈರಾಣು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಈ ಔಷಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ವೈರಸ್​ಗಳ ಪ್ರಮಾಣದಲ್ಲಿ 10 ಸಾವಿರಪಟ್ಟು ಇಳಿಮುಖವಾಗಿದೆ ಎಂಬುದು ಟೆಕ್ಸಾಸ್​ ವಿವಿಯ ವೈದ್ಯಕೀಯ ವಿಭಾಗ ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ.

ಇದಲ್ಲದೇ, ಚೀನಾದ ವುಹಾನ್​ನಲ್ಲಿ ಈ ಔಷಧ ಪ್ರಯೋಗಿಸಿದ 77 ರೋಗಿಗಳನ್ನು ಪರೀಕ್ಷೆ ಮಾಡಿದ ಚೀನಾ, ಆಸ್ಟ್ರೇಲಿಯಾ, ಕೆನಡಾ ವಿವಿಗಳ ತಂಡವೂ ಕೂಡ ವೈರಸ್​ ಹಬ್ಬುವ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಎಂದು ವರದಿ ನೀಡಿವೆ. ಕೋವಿಡ್​ನ ಆರಂಭಿಕ ಹಂತದಲ್ಲೇ ಈ ಔಷಧ ನೀಡಿದರೆ, ರೋಗಿಗೆ ಭಾರಿ ಪ್ರಯೋಜನವಾಗಲಿದೆ. ವೈರಸ್​ ಪ್ರಮಾಣವನ್ನು ಕಡಿಮೆಗೊಳಿಸಿ, ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದೇ ಕಂಪನಿ, ಸದ್ಯ ಕೋವಿಡ್​ ರೋಗಿಗಳಿಗೆ ಬಳಸಲಾಗುತ್ತಿರುವ ಹೈಡ್ರೊಕ್ಸಿಕ್ಲೊರೊಕ್ವಿನ್​ (ಎಚ್​ಸಿಕ್ಯೂ) ಮಾತ್ರೆಗಳನ್ನು ಕೂಡ ತಯಾರಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net