ಫೇಸ್‌ಬುಕ್‌ ಸಿರಿವಂತಿಕೆಯನ್ನೇ ಅಲ್ಲಾಡಿಸಿದ ಕಪ್ಪು ವರ್ಣೀಯರ ಹತ್ಯೆ! ಯಾಕೆ ಗೊತ್ತಾ?

facebook
Published on

ವಾಷಿಂಗ್ಟನ್‌: ಈ ಜಗತ್ತಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎನ್ನುವುದು ತುಂಬಾ ಹಿಂದಿನಿಂದಲೂ ಬಂದಿರುವ ಉಕ್ತಿ. ಮೇಲ್ವರ್ಗದವರು ಎನಿಸಿಕೊಂಡವರು ತಮ್ಮ ಸ್ಥಾನವನ್ನು ಭದ್ರವಾಗಿರಿಸಿಕೊಳ್ಳಬೇಕಾದರೆ ಅದಕ್ಕೆ ಕೆಳ ವರ್ಗದವರು ಎನಿಸಿಕೊಂಡವರ ಶ್ರಮ ಅಪಾರ. ಆದ್ದರಿಂದಲೇ ಇವರಿಂದ ಅವರು, ಅವರಿಂದ ಇವರು.

ಈ ಮಾತು ಇದೀಗ ಪ್ರಪಂಚದ ಅತ್ಯಂತ ಸಿರಿವಂತ ಎನಿಸಿಕೊಂಡಿರುವ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್‌ ಝುಕರ್ಬರ್ಗ್ ಅವರಿಗೂ ಅನ್ವಯವಾಗುತ್ತದೆ. ಅಮೆರಿಕ ಮೂಲದ ಫೇಸ್‌ಬುಕ್‌ ಸಂಸ್ಥೆ ಈ ಪರಿಯಲ್ಲಿ ಸಿರಿವಂತಿಕೆ ಪಡೆಯಬೇಕಾದರೆ ಅದರ ಹಿಂದಿರುವ ಶಕ್ತಿ ಅದಕ್ಕೆ ಬರುವ ಜಾಹೀರಾತುಗಳು ಎನ್ನುವುದು ಹಲವರಿಗೆ ತಿಳಿದಿರಲಾರದು.

ಜಾಹೀರಾತಿನ ಮೂಲಕವೇ ಕೋಟಿಕೋಟಿ ಲಕ್ಷದಷ್ಟು ಸಂಪಾದನೆ ಮಾಡುತ್ತಿದ್ದ ಫೇಸ್‌ಬುಕ್‌ ಇದೀಗ ತನ್ನ ಸಿರಿವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ, ಅಮೆರಿಕದಲ್ಲಿ ನಡೆದಿರುವ ಕಪ್ಪು ವರ್ಣೀಯರ ಹತ್ಯೆ! #StopHate4Profit ಹ್ಯಾಷ್‌ಟ್ಯಾಗ್‌ ಮೂಲಕ ಕಪ್ಪುವರ್ಣೀಯರ ಹತ್ಯೆಯನ್ನು ಖಂಡಿಸುತ್ತ ಈ ಬಹುದೊಡ್ಡ ನಿರ್ಧಾರಗಳನ್ನು ಅನೇಕ ಕಂಪನಿಗಳು ತೆಗೆದುಕೊಂಡಿವೆ.

ಹೌದು. ಜಾರ್ಜ್‌ ಫ್ಲಾಯ್ಡ್ ಹಾಗೂ ರೇಶರ್ಡ್‌ ಬ್ರೂಕ್ಸ್‌ ಎಂಬ ಕಪ್ಪು ವರ್ಣೀಯರ ಹತ್ಯೆಯನ್ನು ಖಂಡಿಸಿ ಇದೀಗ, ಕೆಲವು ಕಂಪನಿಗಳು ಫೇಸ್‌ಬುಕ್‌ಗೆ ನೀಡುವ ಜಾಹೀರಾತುಗಳನ್ನು ನಿಲ್ಲಿಸಿವೆ. 2020ರ ಡಿಸೆಂಬರ್‌ವರೆಗೂ ತಾವು ಯಾವುದೇ ಕಾರಣಕ್ಕೂ ಜಾಹೀರಾತು ನೀಡುವುದಿಲ್ಲ ಎಂದು ಅವು ಹೇಳಿವೆ.

ಇದರಿಂದಾಗಿ ಫೇಸ್‌ಬುಕ್‌ ಸುಮಾರು 7 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಇದರ ಮಾಲೀಕ ಮಾರ್ಕ್‌ ಝುಕರ್ಬರ್ಗ್ ಸಿರಿವಂತಿಕೆಯ ಪಟ್ಟಿಯೂ ಕುಸಿದಿದೆ!

ಫೇಸ್‌ಬುಕ್‌ ಷೇರುಗಳು ಕಳೆದ ಮಾರುಕಟ್ಟೆ ವಹಿವಾಟಿನಲ್ಲಿ ಶೇ 8.3 ರಷ್ಟು ಕುಸಿತ ಕಂಡಿತ್ತು. ಮಾರ್ಕ್ ಅವರ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ 82.3 ಬಿಲಿಯನ್ ಡಾಲರ್ ಇಳಿಕೆಯಾಗಿದೆ.

ಬ್ರಿಟಿಷ್ ಡಚ್ ಸಂಸ್ಥೆ ಕೂಡಾ ಫೇಸ್ಬುಕ್ ಗೆ ಜಾಹೀರಾತು ನೀಡುವುದಿಲ್ಲ ಎಂಬ ಬಳಿಕ 56 ಮಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕುಸಿದಿದೆ. ವೇರಿಜಾನ್, ಬೆನ್ ಅಂಡ್ ಜೆರಿ, ದಿ ನಾರ್ಥ್ ಫೇಸ್ ಸೇರಿದಂತೆ ಹಲವು ಕಂಪನಿಗಳು #StopHate4Profit ಅಭಿಯಾನ ನಡೆಸಿವೆ. ನಾಗರಿಕ ಹಕ್ಕು ಸಂಘಟನೆಗಳು ಈ ಅಭಿಯಾನಕ್ಕೆ ಕೈಜೋಡಿಸಿವೆ. ಇದರಿಂದಾಗಿ ಫೇಸ್‌ಬುಕ್‌ ಜತೆ, ಟ್ವಿಟರ್‌ ಕೂಡ ನಷ್ಟ ಅನುಭವಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net