

ಅಹಮದಾಬಾದ್: ಏಕದಿನ ವಿಶ್ವಕಪ್ ಫಿನಾಲೆಯಲ್ಲಿ ಸೋಲಿನ ಕಹಿ ಮಾಸುವ ಮುನ್ನವೇ ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಆಡಲಿದೆ. ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಮಿ. 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ ಸಮಯದಲ್ಲಿ ಕೆಲವು ಪ್ರತಿಭಾವಂತ ಆಟಗಾರರನ್ನು ಕಡೆಗಣಿಸಲಾಗಿದ್ದು, ಈ ಪೈಕಿ ಸ್ಪಿನ್ನರ್ ಯಜುವೇಂದ್ರ ಚಹಲ್ ಸಹ ಒಬ್ಬರಾಗಿದ್ದಾರೆ. ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿರುವ ಚಹಲ್ ಇದೀಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಾಖಂಡದ ವಿರುದ್ಧ 6 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಹಲ್, ಒಂದು ಅಥವಾ ಇನ್ನೊಂದು ರೀತಿಯಲ್ಲಿ ನಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನನ್ನ ತಂಡಕ್ಕೆ ಕೊಡುಗೆ ನೀಡಿದ್ದು ಸಂತೋಷವಾಗಿದೆ. ನಿಮ್ಮೆಲ್ಲರ ಹಾರೈಕೆಗೆ ಅಭಿನಂದನೆಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತ ಚಹಲ್ ತಮ್ಮನ್ನು ತಂಡದಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಆಯ್ಕೆ ಸಮಿತಿ ವಿರುದ್ಧ ಬಹಿರಂಗವಾಗಿ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು. ಇದೀಗ ದೇಶೀಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಚಹಲ್ ಮತ್ತೊಮ್ಮೆ ಆಯ್ಕೆಗಾರರ ಗಮನ ಸೆಳೆಯಲು ಯತ್ನಿಸಿದ್ದು, ಈ ಬಾರಿ ಯಶ ಕಾಣಲಿದ್ದಾರ ಎಂದು ಕಾದು ನೋಡಬೇಕಿದೆ.