ಮಾಜಿ ಕ್ರಿಕೆಟಿಗನ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಫಿಕ್ಸ್; ಕೇಂದ್ರ ಸಚಿವರೊಂದಿಗಿನ ಚರ್ಚೆಯ ವಿಡಿಯೋ ವೈರಲ್

Yuvraj Gambhir
Published on

ನವದೆಹಲಿ: ಕ್ರಿಕೆಟಿಗರಿಗೂ ರಾಜಕೀಯಕ್ಕೂ ಅವಿನಾಭಾವ ನಂಟಿದೆ ಎಂದು ಹೇಳಬಹುದಾಗಿದೆ. ಅನೇಕ ಕ್ರಿಕೆಟಿಗರು ನಿವೃತ್ತಿ ಬಳಿಕ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದು ಯಶಸ್ಸು ಕೂಡ ಕಂಡಿದ್ದಾರೆ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದ್ದು, ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಸಖತ್​ ಸೌಂಡ್​ ಮಾಡುತ್ತಿದೆ.

ಅದಕ್ಕೆ ಪೂರಕವೆಂಬಂತೆ ಕಳೆದ ಕೆಲ ದಿನಗಳ ಹಿಂದೆ ಯುವರಾಜ್​ ಸಿಂಗ್ ತಮ್ಮ ತಾಯಿ ಶಬ್ನಮ್​ ಅವರೊಟ್ಟಿಗೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಯುವರಾಜ್​ ಸಿಂಗ್​ ರಾಜಕೀಯ ಪ್ರವೇಶಕ್ಕೆ ಪುಷ್ಠಿ ಸಿಕ್ಕಿತ್ತು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವರಾಜ್​ ಸಿಂಗ್​ ಗುರುದಾಸ್​ಪುರದಿಂದ ಸ್ಫರ್ಧಿಸಲು ತಯಾರಿ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಅವರು ನಿತಿನ್​ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ಸಂಸದ ಸನ್ನಿ ಡಿಯೋಲ್​ಗೆ ಈ ಬಾರಿ ಟಿಕೆಟ್​ ಕೊಡಲು ಬಿಜೆಪಿ ಹಿಂಜರಿಯುತ್ತಿದ್ದು, ಬಿಜೆಪಪಿಯಿಂದ ಕಣಕ್ಕಿಳಿಯಲು ಯುವರಾಜ್​ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಯುವರಾಜ್​ ಸಿಂಗ್​ ಭೇಟಿಯಾಗಿ ನಾಲ್ಕು ದಿನಗಳು ಕಳೆದರೂ ನಿತಿನ್ ಗಡ್ಕರಿ ಅಥವಾ ಬಿಜೆಪಿ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಇದುವರೆಗೆ ನೀಡಿಲ್ಲ. ಆದರೆ, ಯುವರಾಜ್​ ಸಿಂಗ್​ ತಂದೆ ಯೋಗರಾಜ್​ ಮಗನ ರಾಜಕೀಯ ಪ್ರವೇಶಕ್ಕೆ ಉತ್ಸುಕತೆ ತೋರುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯುವರಾಜ್​ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕ್ರಿಕೆಟಿಗರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಹೊಸದೇನಲ್ಲ. ಮಾಜಿ ಕ್ರಿಕೆಟಿಗರಾದ ಗೌತಂ ಗಂಭೀರ್, ಮೊಹಮ್ಮದ್​ ಅಜರುದ್ದೀನ್, ರವೀಂದ್ರ ಜಡೇಜಾ ಪತ್ನಿ ರಿವಾಬಾ ಸೇರಿದಂತೆ ಅನೇಕರು ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net