ಭಾನುವಾರ ಕಾರ್ಯಕರ್ತರ ಸಮ್ಮುಖದಲ್ಲಿ ನನ್ನ ನಿರ್ಧಾರ: ಟಿಕೆಟ್​ ವಂಚಿತ ವೈಎಸ್​ವಿ ದತ್ತ

YSV Datta
Published on

ಕಡೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ವೈಎಸ್​ವಿ ದತ್ತ, ತಮ್ಮ ಮುಂದಿನ ನಿರ್ಧಾರವನ್ನು ಭಾನುವಾರ ಪ್ರಕಟಿಸಲಿರುವುದಾಗಿ ಹೇಳಿದ್ದಾರೆ. ಟಿಕೆಟ್ ವಂಚಿತರಾದ ಕುರಿತು ಕಡೂರಿನ ಯಗಟಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಜೆಡಿಎಸ್ ಬಿಟ್ಟು ಕಾಂಗ್ರೆಸ್​ಗೆ ಸೇರ್ಪಡೆ ಆಗಿರುವ ವೈಎಸ್​ವಿ ದತ್ತ ಕಡೂರು ಕ್ಷೇತ್ರದಿಂದ ಸ್ಪರ್ಧಿಸುಲು ಸಜ್ಜಾಗಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲೂ ದತ್ತ ಹೆಸರು ಇರಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಟಿಕೆಟ್ ನೀಡುವುದಕ್ಕೂ ಮುಂಚೆ ಬೇರೆ ಕ್ಷೇತ್ರಗಳಲ್ಲಿ ನಡೆಸಿದ ಪ್ರಕ್ರಿಯೆ ನಮ್ಮಲ್ಲೂ ನಡೆಸಬಹುದಿತ್ತು. ಟಿಕೆಟ್ ಘೋಷಣೆಯಾದ ಬಳಿಕವೂ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾನು ಬಾಡಿಗೆ ಕಾರಿನಲ್ಲಿ ತಿರುಗುತ್ತೇನೆ, ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರವಾಸ ಮಾಡುತ್ತೇನೆ. ವರಿಷ್ಠರು ನನ್ನನ್ನು ಹೇಗೆ ಬೇಕಾದರೂ ಸಂಪರ್ಕ ಮಾಡಬಹುದಿತ್ತು, ಆದರೆ ಅವರು ಸಂಪರ್ಕಿಸಿರಲಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

ವರಿಷ್ಠರು ದತ್ತನ ಶಕ್ತಿ ಭಾರಿ ಗೌಣ, ಏನೂ ತೊಂದರೆ ಆಗುವುದಿಲ್ಲ ಎಂದು ಭಾವಿಸಿರಬಹುದು. ವರಿಷ್ಠರ ನಡೆಯಿಂದ ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ನಿಮ್ಮನ್ನು ಕರೆಸಿ ಮಾತನಾಡದಿರುವುದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಹಾಗಾಗಿ ಸ್ವಾಭಿಮಾನದ ಪದ ಬಳಕೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾನು ಯಾವುದೇ ಷರತ್ತು ಹಾಕಿ ಪಕ್ಷಕ್ಕೆ ಸೇರಿದವನಲ್ಲ. ಸಮೀಕ್ಷೆಯಲ್ಲಿ ಹಾಗೂ ಜನ ಅಭಿಪ್ರಾಯದಲ್ಲಿ ನನ್ನ ಹೆಸರು ಬರಬಹುದು ಎಂದು ಭಾವಿಸಿದ್ದೆ. ಸಮೀಕ್ಷೆ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆ ಎಂದು ತಿಳಿದಿದ್ದೆ. ಸಮೀಕ್ಷೆ ಬಗ್ಗೆ ಪೂರ್ಣವಾಗಿ ನಂಬಿಕೆ ಇಟ್ಟಿದ್ದೆ. ನಾನು ಸಾಮಾನ್ಯರಲ್ಲಿ ಸಾಮಾನ್ಯ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ, ಹಣ ಬಲವಿಲ್ಲ. ನಾನು ನನ್ನ ಜನರನ್ನು ನಂಬಿಕೊಂಡಿದ್ದೇನೆ. ನನ್ನ ಅಭಿಮಾನಿಗಳು ಹಾಗೂ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ನನ್ನ ಕುಟುಂಬದಲ್ಲಿ ಸೂತಕ ಆವರಿಸಿದ ರೀತಿ ವಾತಾವರಣ ನಿರ್ಮಾಣವಾಗಿದೆ. ನನ್ನನ್ನು ನಂಬಿದವರಿಗೆ ಅನ್ಯಾಯ ಮಾಡಲು ನಾನು ತಯಾರಿಲ್ಲ. ಭಾನುವಾರ ಕಾರ್ಯಕರ್ತರ ಸಮ್ಮುಖದಲ್ಲಿ ನಾನು ನನ್ನ ನಿರ್ಧಾರ ತಳೆಯುತ್ತೇನೆ ಎಂದು ವೈಎಸ್​ವಿ ದತ್ತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net