

YouTube Village : ಛತ್ತೀಸ್ಗಢದ ಒಂದು ಸಣ್ಣ ಹಳ್ಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಏಕೆಂದರೆ, ಈ ಹಳ್ಳಿ ಯೂಟ್ಯೂಬ್ ವಿಡಿಯೋಗಳಿಂದಲೇ ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಯನ್ನು ಸಾಧಿಸಿದ್ದು, ಭಾರತದ ಯೂಟ್ಯೂಬ್ ರಾಜಧಾನಿ ಎಂಬ ಹೆಸರು ಗಳಿಸಿದೆ. ಯಾವುದು ಆ ಗ್ರಾಮ ಅಂತೀರಾ? ಇಲ್ಲಿದೆ ಒಂದು ಇಂಟೆರೆಸ್ಟಿಂಗ್ ಮಾಹಿತಿ.
ಛತ್ತೀಸ್ಗಢದ ರಾಯ್ಪುರ ಜಿಲ್ಲೆಯ ತುಳಸಿ ಹೆಸರಿನ ಹಳ್ಳಿ ಭಾರತದ ಯೂಟ್ಯೂಬ್ ರಾಜಧಾನಿ ಎನಿಸಿಕೊಂಡಿದೆ. ಇಲ್ಲಿನ ಗ್ರಾಮಸ್ಥರು ತಮ್ಮ ಕತೆಗಳು ಮತ್ತು ಪ್ರತಿಭೆಯನ್ನು ಹೊರ ಜಗತ್ತಿನೊಂದಿಗೆ ಹಂಚಿಕೊಳ್ಳಲು ಯೂಟ್ಯೂಬ್ ಅನ್ನು ಒಂದು ಮಾರ್ಗವಾಗಿ ಆರಿಸಿಕೊಂಡಿದ್ದಾರೆ. ಇಲ್ಲಿ ಯುವಕರು ಮತ್ತು ಹಿರಿಯರು ಎಂಬ ಯಾವುದೇ ವ್ಯತ್ಯಾಸ ಇಲ್ಲ. ಇಲ್ಲಿರುವ ಪ್ರತಿಯೊಬ್ಬರೂ ಕಂಟೆಂಟ್ ಕಿಂಗ್ಗಳು ಎಂದೇ ಹೇಳಬಹುದು. ಅಚ್ಚರಿಯ ಸಂಗತಿ ಏನೆಂದರೆ, ಇಲ್ಲಿನ ಹೆಚ್ಚಿನ ಯೂಟ್ಯೂಬರ್ಗಳು ಮಹಿಳೆಯರಾಗಿದ್ದಾರೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯೂಟ್ಯೂಬರ್ಗಳು ಇರುವುದರಿಂದ ಛತ್ತೀಸ್ಗಢದ ರಾಯ್ಪುರದ ತುಳಸಿ ಗ್ರಾಮವನ್ನು ಯೂಟ್ಯೂಬರ್ಗಳ ಗ್ರಾಮವೆಂದೇ ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಸುಮಾರು 432 ಕುಟುಂಬಗಳಿವೆ. ಇಲ್ಲಿನ ಜನಸಂಖ್ಯೆ 3 ರಿಂದ 4 ಸಾವಿರದ ನಡುವೆ ಇದೆ. ಈ ಪೈಕಿ 1000 ಜನರು ಯೂಟ್ಯೂಬ್ ಮೂಲಕ ತಮ್ಮ ಆದಾಯವನ್ನು ಗಳಿಸುತ್ತಾರೆ.
ಇನ್ನು ಈ ಗ್ರಾಮದಲ್ಲಿ ವಾಸಿಸುವ 5 ವರ್ಷದ ಮಗುವಿನಿಂದ ಹಿಡಿದು 85 ವರ್ಷದ ಅಜ್ಜಿಯವರೆಗೆ ಎಲ್ಲರೂ ಯೂಟ್ಯೂಬ್ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದರೇ ಅತಿಶಯೋಕ್ತಿಯಲ್ಲ. ಎಲ್ಲ ಗ್ರಾಮಸ್ಥರು ತಮ್ಮ ವಿಶೇಷ ಸ್ಕಿಟ್ಗಳಿಗಾಗಿ ಒಟ್ಟಿಗೆ ಸೇರುತ್ತಾರೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ವಹಿಸುತ್ತಾರೆ.
ಯೂಟ್ಯೂಬ್ ಸಾಮಾಜಿಕ ಬದಲಾವಣೆಗೆ ಒಂದು ವೇದಿಕೆಯಾಗಿದ್ದು, ಹೆಚ್ಚಿನ ಆರ್ಥಿಕ ಸಬಲೀಕರಣವನ್ನು ತಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಯೂಟ್ಯೂಬರ್ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆ ಜೀವನೋಪಾಯಕ್ಕೆ ಕಡಿಮೆ ಅವಕಾಶಗಳನ್ನು ಹೊಂದಿದ್ದ ಮಹಿಳೆಯರು ಈಗ ಅದರ ಮೂಲಕ ಸ್ವತಂತ್ರವಾಗಿ ಹಣ ಸಂಪಾದಿಸುತ್ತಿದ್ದಾರೆ. ಇದಲ್ಲದೆ, ಇದು ಮಕ್ಕಳನ್ನು ಕೆಟ್ಟ ಅಭ್ಯಾಸಗಳು ಮತ್ತು ಅಪರಾಧಗಳಿಂದ ದೂರವಿಡುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಇದೇ ಸಂದರ್ಭದಲ್ಲಿ ತುಳಸಿ ಗ್ರಾಮದಲ್ಲಿ ವಾಸಿಸುವ ಜೈ ವರ್ಮಾ ಮತ್ತು ಜ್ಞಾನೇಂದ್ರ ಎಂಬ ಇಬ್ಬರು ಸ್ನೇಹಿತರು 2016 ರಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಬಾಲ್ಯದಿಂದಲೂ ನಟನೆಯ ಬಗ್ಗೆ ಒಲವು ಹೊಂದಿದ್ದ ಜೈ ವರ್ಮಾ ಶಿಕ್ಷಣ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ತಮ್ಮ ನೆರೆಯ ಜ್ಞಾನೇಂದ್ರ ಅವರೊಂದಿಗೆ ಯೂಟ್ಯೂಬ್ನಲ್ಲಿ ಅಧ್ಯಯನ ಮತ್ತು ಹಾಸ್ಯ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಪ್ರಾರಂಭಿಸಿದರು. ಆರಂಭದಲ್ಲಿ, ಅನೇಕ ತಾಂತ್ರಿಕ ಸಮಸ್ಯೆಗಳು ಮತ್ತು ಹಕ್ಕುಸ್ವಾಮ್ಯ ಸಮಸ್ಯೆಗಳಿದ್ದವು. ಆದರೆ ಅವರು ಅವೆಲ್ಲವನ್ನೂ ನಿವಾರಿಸಿ ಯಶಸ್ವಿಯಾದರು.
ದಿನಗಳು ಕಳೆದಂತೆ ಉತ್ತಮ ಆದಾಯದ ಮೂಲವಾಗುತ್ತಿದ್ದಂತೆ, ಎಲ್ಲರೂ ಅದರತ್ತ ಮುಖ ಮಾಡಿದರು. ಆರಂಭದಲ್ಲಿ ಮೊಬೈಲ್ ಫೋನ್ಗಳಲ್ಲಿ ಚಿತ್ರೀಕರಿಸುತ್ತಿದ್ದವರು ಇಂದು ಕ್ಯಾಮೆರಾಗಳು ಮತ್ತು ಇತರ ಶೂಟಿಂಗ್ ಉಪಕರಣಗಳನ್ನು ಪಡೆದುಕೊಂಡಿದ್ದಾರೆ. ತಮ್ಮ ಹಾಸ್ಯವನ್ನು ಪ್ರದರ್ಶಿಸಲು ಅಥವಾ ಜ್ಞಾನದ ಭಂಡಾರವನ್ನು ಒದಗಿಸಲು, ಚಿಕ್ಕ ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇದರಲ್ಲಿ ತೊಡಗಿಕೊಂಡಿದ್ದಾರೆ. ಇಡೀ ಗ್ರಾಮವೇ ಯೂಟ್ಯೂಬ್ನಿಂದ ಉತ್ತಮ ಆದಾಯವನ್ನು ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್)