

ನವದೆಹಲಿ: ಭಾರತದ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ವಂಶಾಭಿವೃದ್ಧಿ ಪ್ರಮಾಣ ಸ್ಥಿರವಾಗಿ ಕಡಿಮೆಯಾಗುತ್ತಿದ್ದು, 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಭಾರಿ ಆತಂಕಕ್ಕೆ ಕಾರಣವಾಗುತ್ತಿದೆ.
ಒಂದು ಹಂತದಲ್ಲಿ ಇಡೀ ಜಗತ್ತಿನಲ್ಲೇ ಭಾರತ ಅತಿಹೆಚ್ಚು ಯುವಜನಾಂಗವನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿತ್ತು. ಆದರೆ, ಈಗ ಅದು ಈ ಹೆಗ್ಗಳಿಕೆಯನ್ನು ಕಳೆದುಕೊಳ್ಳುತ್ತಿದ್ದು, ಅತಿಹೆಚ್ಚು ಹಿರಿಯ ನಾಗರಿಕರು ಇರುವ ರಾಷ್ಟ್ರವಾಗುವತ್ತ ಸಾಗುತ್ತಿದೆ.
ಭಾರತದ ರೆಜಿಸ್ಟ್ರಾರ್ ಜನರಲ್ ಮತ್ತು ಜನಣಗತಿ ಆಯುಕ್ತರು ಬಿಡುಗಡೆ ಮಾಡಿರುವ ಮಾದರಿ ನೋಂದಣಿ ಪದ್ಧತಿ 2018ರ ವರದಿಯಲ್ಲಿ ಲಿಂಗ, ಗ್ರಾಮಾಂತರ, ನಗರ ಪ್ರದೇಶ ಎಂಬ ಯಾವುದೇ ಭೇದಭಾವವಿಲ್ಲದೆ, 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರ ಜನಸಂಖ್ಯೆ ದೇಶದಲ್ಲಿ ಇದೇ ಮೊದಲ ಬಾರಿಗೆ ಶೇ.50ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಭಾರತದ ವಂಶಾಭಿವೃದ್ಧಿ ಪ್ರಮಾಣ ಸ್ಥಿರವಾಗಿ ಕಡಿಮೆಯಾಗುತ್ತಿರುವುದು ಮತ್ತು ಜೀವಾವಧಿ ಹೆಚ್ಚಾಗುತ್ತಿರುವುದು ಯುವಜನಾಂಗದ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗಲು ಕಾರಣವಾಗಿದೆ. ಇದರ ಪರಿಣಾಮ, ಮೀಡಿಯನ್ ವಯಸ್ಸು ಕೂಡ ಹೆಚ್ಚಾಗುತ್ತಿದೆ. ನಗರ ಪ್ರದೇಶದಲ್ಲಿ 25 ವರ್ಷದ ಯುವಕರ ಸರಾಸರಿ ಶೇ.49.9ಕ್ಕೆ ಕುಸಿದಿದೆ. 2017ರಲ್ಲಿ ಇದು ಶೇ.50.2 ಇತ್ತು ಎಂದು ವರದಿ ಹೇಳಿದೆ.
ನಗರ ಪ್ರದೇಶದ ಯುವಕ ಮತ್ತು ಯುವತಿಯರು ಮತ್ತು ಗ್ರಾಮಾಂತರ ಪ್ರದೇಶಗಳ ಯುವಕ, ಯುವತಿಯರ ಪೈಕಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಜನಸಂಖ್ಯೆ ಶೇ.46.9ಕ್ಕೆ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಂಶಾಭಿವೃದ್ಧಿ ಪ್ರಮಾಣ ಹೆಚ್ಚಿರುವ ಪ್ರದೇಶಗಳು: ವಂಶಾಭಿವೃದ್ಧಿ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳ ಪೈಕಿ ಬಿಹಾರ ಮುಂಚೂಣಿಯಲ್ಲಿದೆ. ಇಲ್ಲಿ ವಂಶಾಭಿವೃದ್ಧಿ ಪ್ರಮಾಣ ಶೇ.3.2 ಇದೆ. ಅಂದರೆ ಇಲ್ಲಿ ಶೇ.57.2 ಜನರು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ಧಾರೆ. ಶೇ.2.9 ಪ್ರಮಾಣದೊಂದಿಗೆ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಶೇ.52.7 ಜನರು 25 ವರ್ಷ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ವಂಶಾಭಿವೃದ್ಧಿ ಪ್ರಮಾಣ ಕಡಿಮೆ ಇರುವ ರಾಜ್ಯಗಳು: ಕೇರಳ ಅತ್ಯಂತ ಕನಿಷ್ಠ ವಂಶಾಭಿವೃದ್ಧಿ ಪ್ರಮಾಣ ಹೊಂದಿದೆ. ಹಾಗಾಗಿ ಈ ರಾಜ್ಯದ ಒಟ್ಟಾರೆ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. 1991ರ ಮಾಹಿತಿ ಪ್ರಕಾರ ಕೇರಳದ ವಂಶಾಭಿವೃದ್ಧಿ ಪ್ರಮಾಣ ಶೇ.1.8 ಇತ್ತು. ಅದು ಈಗ ಶೇ.1.7ಕ್ಕೆ ಕುಸಿದಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ 1991ರಲ್ಲಿ ಇದ್ದ ಶೇ.3ರ ವಂಶಾಭಿವೃದ್ಧಿ ಪ್ರಮಾಣ ಇದೀಗ ತೀವ್ರವಾಗಿ ಕುಸಿದಿದೆ. ತಮಿಳುನಾಡಿನ ಪ್ರಮಾಣ ಶೇ.2.2ಕ್ಕೆ ಇಳಿಕೆಯಾಗಿದ್ದರೆ, ಇನ್ನುಳಿದ ರಾಜ್ಯಗಳ ಪ್ರಮಾಣ ಶೇ.1.6 ಆಗಿದೆ. ಹೀಗಾಗಿ ಈ ರಾಜ್ಯಗಳಲ್ಲಿ 25 ವಯಸ್ಸಿನ ಯುವಕ, ಯುವತಿಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.