ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಸಾಕಷ್ಟು ಸೆಲೆಬ್ರಿಟಿಗಳು ಭೇಟಿಯಾಗಿ ಬರುತ್ತಿದ್ದಾರೆ. ದರ್ಶನ್ ಕುಟುಂಬವಂತೂ ನಿತ್ಯವು ಹೋಗಿ ಬರುತ್ತಲೇ ಇದೆ. ಇನ್ನು ಕೆಲವರು ಜೈಲಿನಲ್ಲೂ ದರ್ಶನ್ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಯುವಕನೊಬ್ಬ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಲ್ಲದೆ, ತನ್ನನ್ನು ಬಂಧಿಸಿದರೆ ಜೈಲಿನಲ್ಲಿ ದರ್ಶನ್ ಇರುವ ಸೆಲ್ನಲ್ಲಿ ಹಾಕಿ ಎಂದು ವಿಶೇಷ ಮನವಿ ಮಾಡಿದ್ದಾನೆ.
ಯುವಕನ ಹೆಸರು ಪೃಥ್ವಿರಾಜ್. ಈತ ಚಿತ್ರದುರ್ಗದ ಚಳ್ಳಕೆರೆ ಪಟ್ಟಣದ ಗಾಂಧಿನಗರದ ನಿವಾಸಿ. ಸರ್ಕಾರಕ್ಕೆ ಬೆದರಿಕೆ, ವಿಶೇಷ ಮನವಿ ಮಾಡಿರುವ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈತ ಬೆದರಿಕೆ ಹಾಕಿದ್ದು ಏಕೆ? ದರ್ಶನ್ ಇರುವ ಸೆಲ್ಗೆ ಹಾಕುವಂತೆ ಕೇಳಿಕೊಂಡಿದ್ದೇಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈ ಪೃಥ್ವಿರಾಜ್ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ. ಆದರೆ, ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಪಾಲಕರ ಸಂಪರ್ಕಕ್ಕೂ ಆತ ಸಿಗುತ್ತಿರಲಿಲ್ಲ. ಇದರಿಂದ ಚಿಂತೆಗೀಡಾದ ಯುವಕನ ತಾಯಿ, ಕೆಲ ದಿನಗಳ ಹಿಂದೆ ಸ್ಥಳೀಯ ಚಳ್ಳಕೆರೆ ಪೊಲೀಸ್ ಠಾಣೆಗೆ ತೆರಳಿ, ನನ್ನ ಮಗ ಕಾಣೆಯಾಗಿದ್ದಾನೆ ಮತ್ತು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ದಾಖಲಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಆಕೆಯ ದೂರನ್ನು ತೆಗೆದುಕೊಳ್ಳಲಿಲ್ಲ. ಇದರಿಂದ ನಿರಾಸೆಯಿಂದಲೇ ಪೃಥ್ವಿರಾಜ್ ತಾಯಿ ಮನೆಗೆ ವಾಪಾಸ್ ಆಗಿದ್ದರು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಸ್ವಲ್ಪ ದಿನಗಳ ನಂತರ ಪೃಥ್ವಿರಾಜ್ ಮನೆಗೆ ಮರಳಿದ್ದಾನೆ. ಮಗನನ್ನು ಮತ್ತೆ ನೋಡಿದ ತಾಯಿಯ ಮನಸ್ಸು ನಿರಾಳವಾಯಿತು. ಇದು ಇಷ್ಟಕ್ಕೆ ಮುಗಿದಿದ್ದರೆ ನಂತರದ ಹೈಡ್ರಾಮ ನಡೆಯುತ್ತಿರಲೇ ಇಲ್ಲ.
ಮನೆಗೆ ಮರಳಿದ ಮಗನ ಬಳಿ ಪೊಲೀಸ್ ಠಾಣೆಯಲ್ಲಿ ನಡೆದ ಪ್ರಸಂಗವನ್ನು ತಾಯಿ ವಿವರಿಸಿದ್ದಾಳೆ. ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂಬ ವಿಚಾರ ತಿಳಿದು ಆಕ್ರೋಶಗೊಂಡ ಪೃಥ್ವಿರಾಜ್, ಸೀದಾ ಪೊಲೀಸ್ ಠಾಣೆಗೆ ತೆರಳಿದ್ದಾನೆ. ನನ್ನ ತಾಯಿ ದೂರು ನೀಡಿದರು ನೀವು ಏಕೆ ದೂರು ಸ್ವೀಕರಿಸಲಿಲ್ಲ ಎಂದು ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾನೆ. ಅಲ್ಲದೆ, ಆ ಘಟನೆಯನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಕೂಡ ಮಾಡಿದ್ದಾನೆ. ಇದೆಲ್ಲವನ್ನು ನೋಡಿದ ಪೊಲೀಸರು ಆತನ ಮೊಬೈಲ್ ಕಸಿದುಕೊಂಡು ಬುದ್ಧಿ ಹೇಳಿ ಮನೆ ಕಳುಹಿಸಿದ್ದಾರೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಪೃಥ್ವಿರಾಜ್, ಪೊಲೀಸ್ ಠಾಣೆಯ ಬಳಿಯಲ್ಲೇ ಮತ್ತೊಂದು ವಿಡಿಯೋ ರೆಕಾರ್ಡ್ ಮಾಡಿ, ತನಗಾದ ಅನ್ಯಾಯದ ಬಗ್ಗೆ ತಿಳಿಸುತ್ತಾ ಸ್ಫೋಟದ ಬೆದರಿಕೆ ಹಾಕಿದ್ದಾರೆ.
ಅಷ್ಟಕ್ಕೂ ಪೃಥ್ವಿರಾಜ್ ಹೇಳಿದ್ದೇನು ಎಂದು ನೋಡುವುದಾದರೆ, ನಾನು ಪೊಲೀಸರನ್ನು ಪ್ರಶ್ನೆ ಮಾಡಿ ನ್ಯಾಯ ಕೇಳಿದ್ದಕ್ಕೆ ನನ್ನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ನನ್ನ ತಾಯಿಯ ಎದುರಲ್ಲೇ ನನಗೆ ಥಳಿಸಿದ್ದಾರೆ. ಪೊಲೀಸರ ದೌರ್ಜನ್ಯವನ್ನು ಎಸ್ಪಿ ಬಳಿ ಹೋಗಿ ಖಂಡಿಸುತ್ತೇನೆ ಮತ್ತು ನ್ಯಾಯವನ್ನು ಕೇಳುತ್ತೇನೆ. ಒಂದು ವೇಳೆ ನನಗೆ ನ್ಯಾಯ ಸಿಗದೇ ಹೋದರೆ ಮುಂದೇನು ಮಾಡಬೇಕು ಅಂತಾ ನನಗೆ ಚೆನ್ನಾಗಿ ತಿಳಿದಿದೆ. ನಾನು ಡಿಪ್ಲೋಮೋ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದೇನೆ. ಆದರೂ ನನಗೆ ಎಲೆಕ್ಟ್ರಿಕಲ್ ಕೆಲಸ ಚೆನ್ನಾಗಿ ಗೊತ್ತಿದೆ. ಬೆಂಗಳೂರಿನ ಮುಖ್ಯ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಡಿಆರ್ಡಿಒ, ಮೆಟ್ರೋ ಮತ್ತು ಇಸ್ರೋಗೆ ಎಲ್ಲಿಂದ ವಿದ್ಯುತ್ ಸಂಪರ್ಕ ಇದೆ ಅನ್ನೋದು ನನಗೆ ತಿಳಿದಿದೆ. ಎಲ್ಲಿ ಏನು ಮಾಡಿದರೆ ಸ್ಫೋಟಗೊಳ್ಳುತ್ತೆ ಎಂದು ಗೊತ್ತಿದೆ. ನನಗೆ ನ್ಯಾಯ ಸಿಗದೇ ಹೋದರೆ ನಾನು ಭಯೋತ್ಪಾದಕನಾಗುತ್ತೇನೆ. ಒಂದು ವೇಳೆ ನನ್ನನ್ನು ಬಂಧಿಸಿದರೆ, ನಟ ದರ್ಶನ್ರನ್ನು ಬಂಧಿಸಿ ಇರಿಸಿರುವ ಸೆಲ್ನಲ್ಲೇ ನನ್ನನ್ನು ಹಾಕಿ ಎಂದು ವಿಡಿಯೋದಲ್ಲಿ ಯುವಕ ಪೃಥ್ವಿರಾಜ್ ವಿಶೇಷ ಮನವಿ ಮಾಡಿದ್ದಾನೆ. ಸದ್ಯ ಆತನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇನ್ನು ನಟ ದರ್ಶನ್ ವಿಚಾರಕ್ಕೆ ಬರುವುದಾದರೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊಲೆಯಾದ ರೇಣುಕಾಸ್ವಾಮಿ, ಆರೋಪಿ ಪವಿತ್ರಾ ಗೌಡ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಆರೋಪವಿದೆ. ಹೀಗಾಗಿ ಆತನ ಇನ್ಸ್ಟಾಗ್ರಾಂ ಖಾತೆ ಮತ್ತು ವಾಟ್ಸ್ಆ್ಯಪ್ ಖಾತೆಯ ಡೇಟಾವನ್ನು ಮರಳಿ ಪಡೆಯುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಪಟ್ಟಣಗೆರೆ ಶೆಡ್ ಸುತ್ತಮುತ್ತಲಿಗೆ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದ್ದು, ತಜ್ಞರು ಪರಿಶೀಲಿಸಿ ದತ್ತಾಂಶವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಜುಲೈ 29ಕ್ಕೆ ಮುಂದಿನ ವಿಚಾರಣೆ
ಜುಲೈ 18ರಂದು ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಯಲ್ಲಿ ದರ್ಶನ್ ಮತ್ತು ಇನ್ನಿತರ ಆರೋಪಿಗಳನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಮತ್ತೊಮ್ಮೆ 14 ದಿನಗಳ ಕಾಲ ಅಂದರೆ ಆಗಸ್ಟ್ 1ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಇನ್ನೊಂದೆಡೆ ನಟ ದರ್ಶನ್ ಮನೆಯೂಟಕ್ಕೆ ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿ ಎಂದಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಅಪ್ಪ ಇಲ್ಲ, ತಾಯಿ ಆರೋಗ್ಯ ಸರಿಯಿಲ್ಲ! ಅಂಧನ ಕಷ್ಟಕ್ಕೆ ಕರಗಿ ಮನೆ ನಿರ್ಮಿಸಿಕೊಟ್ಟ ಪೊಲೀಸರಿಗೆ ಹ್ಯಾಟ್ಸಫ್
ಎಣ್ಣೆ ಹಾಕುತ್ತಾ ಕುಡುಕರಿಗೆ ಬಿಟ್ಟಿ ಸಲಹೆ ಕೊಟ್ಟ ಕಿರಾತಕ ಬೆಡಗಿ ಓವಿಯಾ! ನೆಟ್ಟಿಗರಿಂದ ಭಾರಿ ಟೀಕೆ