ದೂರು ಸ್ವೀಕರಿಸಲು ಹಿಂದೇಟು; Police Officer ಕಪಾಳಕ್ಕೆ ಬಾರಿಸಿದ ಯುವಕ

Police Slap
Published on

ಭೋಪಾಲ್​: ದೂರನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಪೊಲೀಸ್​ ಅಧಿಕಾರಿಯ (Police Officer) ಕಪಾಳಕ್ಕೆ ಹೊಡೆದಿರುವ ಘಟನೆ ಮಧ್ಯಪ್ರದೇಶದ ಟಿಕಮ್‌ಗಢ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಹಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾಗಿ ಪ್ರಶ್ನೆಗಳು ಉದ್ಭವಿಸಿದೆ.

ಟಿಕಮ್‌ಗಢ್ ಜಿಲ್ಲೆಯ ಬಡಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ (ನವೆಂಬರ್​ 17) ಅಪರಿಚಿತ ವಾಹನ ಡಿಕ್ಕಿ ಹೊಡೆದು (Road Accident) ಘುರ್ಕಾ ಲೋಧಿ ಎಂಬ 50 ವರ್ಷದ ರೈತ ಮೃತಪಟ್ಟಿದ್ದರು. ಈ ವಿಚಾರವನ್ನು ರೈತನ ಕುಟುಂಬಕ್ಕೆ ಸೋಮವಾರ (ನವೆಂಬರ್​ 18) ತಿಳಿಸಲಾಗಿತ್ತು. ಇದರಿಂದ ಕುಪಿತಗೊಂಡ ರೈತನ ಕುಟುಂಬಸ್ಥರು ಹಾಗೂ ಆತನ ಗ್ರಾಮಸ್ಥರು ರಸ್ತೆ ತಡೆದು ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬಡಗಾಂವ್ ಪೊಲೀಸ್ ಠಾಣಾಧಿಕಾರಿ (Police Officer) ಅನು ಮೇಘಾ ಗುಪ್ತಾ ದುಬೆ ಪ್ರತಿಭಟನಾ ನಿರತರ ಮನವೊಲಿಸಿ ರಸ್ತೆ ತೆರವು ಮಾಡಲು ಮುಂದಾದರು. ಈ ವೇಳೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಇದಕ್ಕೆ ಒಪ್ಪದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಪೊಲೀಸ್​ ಅಧಿಕಾರಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕ ಪೊಲೀಸ್​ ಅಧಿಕಾರಿಯ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಉದ್ರಿಕ್ರರು ಹಾಗೂ ಪೊಲೀಸರ ನಡುವೆ ಸಂಘರ್ಷವಾಗಿದ್ದು, ಆ ಬಳಿಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಮೃತ ರೈತನ ಕುಟುಂಬಸ್ಥರು ಹೇಳುವ ಪ್ರಕಾರ ಪೊಲೀಸರು ಸಕಾಲಕ್ಕೆ ಸ್ಪಂದಿಸದ ಕಾರಣ ಗಾಯಾಳು ಮೃತಪಟ್ಟಿದ್ದು, ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಪೊಲೀಸ್​ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಯುವಕನನ್ನು ವಶಕ್ಕೆ ಪಡೆಯಲಾಗಿದೆಯಾ ಎಂಬುದು ಈವರೆಗೆ ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net