ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

New Project (44)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವೇಣೂರು ಮತ್ತು ಮೂಡುಕೋಡಿ ಗ್ರಾಮಗಳ ಗಡಿಯಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯ ನಡ್ತಿಕಲ್ಲು ಬರ್ಕಜೆ ಎಂಬಲ್ಲಿ ಈಜಾಡಲು ಹೋಗಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಸವನಗುಡಿ ನಿವಾಸಿ ಸೂರಜ್(19), ಬಂಟ್ವಾಳ ತಾಲೂಕು ವಗ್ಗ ಕಾಡಬೆಟ್ಟು ನಿವಾಸಿ ಜೈಸನ್(21) ಮತ್ತು ಮಂಗಳೂರು ತಾಲೂಕು ಕುಪ್ಪೆಪದವು ಕುಳವೂರು ನಿವಾಸಿ ಲಾರೆನ್ಸ್ ಫರ್ನಾಂಡಿಸ್(19) ಮೃತರು.

ವೇಣೂರು ಚರ್ಚ್‌ನ ಸಾಂತ್‌ಮೇರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಮೂವರೂ ಗೆಳೆಯ ವೆಲ್ಸನ್ ಎಂಬುವರ ಮನೆಗೆ ಬುಧವಾರ ಬೆಳಗ್ಗೆ ಬಂದಿದ್ದರು. ಸಂಜೆ 5ರ ಸುಮಾರಿಗೆ ಒಟ್ಟು ಆರು ಮಂದಿ ನದಿಯ ಅಣೆಕಟ್ಟಿನ ಬಳಿ ವಿಹಾರಕ್ಕೆ ತೆರಳಿದ್ದರು. ಅಲ್ಲಿಗೆ ಹೋದವರೇ ನದಿಯ ನೀರನ್ನು ಕಂಡು ಖುಷಿಯಾಗಿ ನಾಲ್ವರು ನೀರಿಗೆ ಇಳಿದಿದ್ದರು. ಇನ್ನಿಬ್ಬರು ನದಿ ದಡದಲ್ಲಿದ್ದರು. ನೀರಿಗಿಳಿದು ಈಜಾಡಲಾರಂಭಿಸಿದ ವೇಳೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಮೇಲೆ ಬರಲಾಗದೆ ಬೊಬ್ಬೆ ಹೊಡೆದಾಗ ಮತ್ತೋರ್ವ ಅವರನ್ನು ರಕ್ಷಿಸಲು ಧಾವಿಸಿದ್ದಾನೆ. ಈ ವೇಳೆ ಮೂವರೂ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ವಿಚಾರ ಅರಿತ ತಕ್ಷಣ ಸ್ಥಳಕ್ಕೆ ವೇಣೂರು ಪೊಲೀಸರು, ಅಗ್ನಿಶಾಮಕದಳದವರು ತೆರಳಿ ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಮೂವರಿಗೂ ನದಿ ದಡದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ, ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದ್ದರಿಂದ ಎಲ್ಲರ ಪ್ರಯತ್ನಗಳು ವಿಫಲವಾಗಿವೆ.

ಹಬ್ಬಕ್ಕಾಗಿ ಬಂದವರು

ಮೃತ ಮೂವರೂ ಮಂಗಳೂರು ನ್ಯೂ ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು. ಸಾಂತ್‌ಮೇರಿ ಹಬ್ಬದ ಖುಷಿಗಾಗಿ ಸಹಪಾಠಿ ವಿದ್ಯಾರ್ಥಿಯ ವೇಣೂರಿನ ಮನೆಗೆ ಆಗಮಿಸಿದ್ದರು. ಮೃತರ ಪೈಕಿ ಒಬ್ಬನಿಗೆ ಈಜು ಬರುತ್ತಿತ್ತು. ಇಬ್ಬರನ್ನು ರಕ್ಷಿಸಲು ಹೋದ ಆತನೂ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೂ ಮೀಸೆ ಮೂಡುತ್ತಿರುವ ಎಳೆ ತರುಣರ ಮೃತ್ಯುವಿನಿಂದ ಪರಿಸರದಲ್ಲಿ ಶೋಕದ ಛಾಯೆ ಆವರಿಸಿತ್ತು. ಮೃತ ಯುವಕರ ಬಂಧುಗಳ ರೋದನ ಹೃದಯ ಕಲಕುತ್ತಿತ್ತು.

ಧಾವಿಸಿದ ತುರ್ತು ಸ್ಪಂದನ ಬಳಗ

ಘಟನೆ ವಿವರ ಅರಿತ ತಕ್ಷಣ ಸ್ಥಳೀಯ ಎಸ್‌ಡಿಪಿಐ ಕಾರ್ಯಕರ್ತರಾದ ತುರ್ತು ಸ್ಪಂದನ ಬಳಗದವರು ಮೃತದೇಹಗಳನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ ಭಾಗಿಯಾದರು. ರೆಸ್ಕೂೃ ತಂಡದ ಕ್ಯಾಪ್ಟನ್ ಆಸಿಫ್ ಗುಂಡೇರಿ, ಫೈಝಲ್, ಶಫಿ, ಝಮೀರ್, ಹಕೀಂ, ಬಾತಿಷ್, ಮತ್ತು ರಿಯಾಝ್ ಪೊಲೀಸರಿಗೆ ಸಹಾಯಕವಾಗಿ ನೀರಿಗಿಳಿದು ಮೃತದೇಹಗಳನ್ನು ಮೇಲೆತ್ತಿ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net