

ಸುಳ್ಯ: ಪೈಚಾರು ಸಮೀಪ ಉಮ್ಮರ್ ಎಂಬುವರ ಗೂಡಂಗಡಿಗೆ ರಾತ್ರಿ ಕಳ್ಳನೊಬ್ಬ ಬಂದು ಅಂಗಡಿಯ ಮೇಲ್ಭಾಗಕ್ಕೆ ಹತ್ತಿ ಅಂಗಡಿಯೊಳಗೆ ಇಳಿದು ಕಳ್ಳತನ ಮಾಡಿ ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನವೆಂಬರ್ 25ರಂದು ರಾತ್ರಿ ಸುಮಾರು 12 ಗಂಟೆಗೆ ಘಟನೆ ನಡೆದಿದ್ದು, ಅಂಗಡಿ ಮಾಲೀಕ ಮಾರನೇ ದಿನ ಬೆಳಗ್ಗೆ ಅಂಗಡಿ ತೆರೆದಾಗ ಕಳ್ಳತನ ನಡೆದಿರುವ ಬಗ್ಗೆ ತಿಳಿದು ಬಂದಿದೆ.ಕಳ್ಳತನವಾದದ್ದು ಚಿಲ್ಲರೆ ಹಣ ಮಾತ್ರ ಎಂಬ ಕಾರಣಕ್ಕಾಗಿ ಈ ವಿಷಯವನ್ನು ಅಂಗಡಿಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸ್ಥಳೀಯರು ಸಿಸಿ ಕ್ಯಾಮರಾ ಫೂಟೇಜ್ ಪರಿಶೀಲನೆ ನಡೆಸಿದಾಗ ಕಳ್ಳನ ಚಲನವಲನ ಕಂಡು ಬಂದಿದೆ. ಅದೇ ದಿನ ಕನಕಮಜಲು ಭಾಗದಲ್ಲಿಯೂ ಇದೇ ರೀತಿಯ ಅಂಗಡಿ ಕಳ್ಳತನವಾದ ಬಗ್ಗೆ ತಿಳಿದು ಬಂದಿದ್ದು, ಅಲ್ಲದೆ ಇದೇ ರೀತಿಯ ಘಟನೆ ಸುಳ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದು, ಈ ಎಲ್ಲ ಕಳ್ಳತನದ ಹಿಂದೆ ಈ ಕಳ್ಳನೇ ಇರಬಹುದು ಎಂಬ ಅನುಮಾನವಿದೆ.