ನಿಮ್ಮ ಇಂಗ್ಲಿಷ್ ಬಹಳ ಚೆನ್ನಾಗಿದೆ; ಡೊನಾಲ್ಡ್​ ಟ್ರಂಪ್​​​ ಹೊಗಳಿದ ಈ ವ್ಯಕ್ತಿ ಯಾರು ಗೊತ್ತಾ? | Donald Trump

Untitled design - 2024-11-12T170040.814
Published on

ಜಕಾರ್ತ: ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಹೊಸದಾಗಿ ಚುನಾಯಿತರಾದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ರಂಪ್ ಕಳೆದ ವಾರವಷ್ಟೇ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇಂಡೋನೇಷ್ಯಾ ಅಧ್ಯಕ್ಷರು ಟ್ರಂಪ್ ಅವರೊಂದಿಗಿನ ಸಂಭಾಷಣೆಯ ಸಂಪೂರ್ಣ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಈ ವಿಡಿಯೋವನ್ನು ಹಂಚಿಕೊಳ್ಳುವಾಗ ಇಂಡೋನೇಷ್ಯಾ ಅಧ್ಯಕ್ಷರು ಅಮೆರಿಕದಲ್ಲಿ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಾನು ನೇರವಾಗಿ ಕರೆ ಮಾಡಿ ಅಭಿನಂದಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಪ್ರಬೋವೊ ಸುಬಿಯಾಂಟೊ ಅವರು ಇಂಡೋನೇಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧಗಳ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ನೇರವಾಗಿ ಕರೆ ಮಾಡಿ ಅಭಿನಂದಿಸುತ್ತಿರುವುದು ನನಗೆ ಸಂತೋಷವಾಗಿದೆ. ಸಾಧ್ಯವಾದರೆ ನಾನು ನಿಮ್ಮನ್ನು ಭೇಟಿ ಮಾಡಿ ಅಭಿನಂದಿಸಲು ಬಯಸುತ್ತೇನೆ ಎಂದು ಪ್ರಬೋವೊ ಸುಬಿಯಾಂಟೊ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಡೊನಾಲ್ಡ್​ ಟ್ರಂಪ್​​ ಧನ್ಯವಾದಗಳು ಎಂದು ಹೇಳುತ್ತಾ, ನೀವು ಇಂಡೋನೇಷ್ಯಾದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿದೆ ಎಂದು ಹೊಗಳುತ್ತಾರೆ.

ಅದಕ್ಕೆ ಉತ್ತರಿಸಿದ ಪ್ರಬೋವೊ ಸರ್, ನನ್ನ ಸಂಪೂರ್ಣ ತರಬೇತಿ ಅಮೆರಿಕನ್ ಆಗಿದೆ ಎಂದು ಹೇಳುತ್ತಾರೆ. ಅದಕ್ಕೆ ಡೊನಾಲ್ಡ್​ ಟ್ರಂಪ್​​​​​ ಗ್ರೇಟ್​ ಎನ್ನುತ್ತಾರೆ. ಸಂಭಾಷಣೆಯಲ್ಲಿ ಪ್ರತಿ ಬಾರಿಯೂ ಪ್ರಬೋವೊ ಸುಬಿಯಾಂಟೊ ಅವರು ಡೊನಾಲ್ಡ್​ ಟ್ರಂಪ್​ ಅವರನ್ನು ಸರ್​ ಎಂದು ಹೇಳುವುದನ್ನು ಕೇಳಬಹುದು. ಮಾತನ್ನು ಮುಂದುವರಿಸಿದ ಟ್ರಂಪ್​​​​ ಅಮೆರಿಕವು ಉತ್ತಮ ಚುನಾವಣೆಯನ್ನು ಹೊಂದಿದೆ ಎಂದು ಹೇಳುತ್ತಾರೆ. ಅದಕ್ಕೆ ಕಳವಳ ವ್ಯಕ್ತಪಡಿಸಿದ ಇಂಡೋನೇಷ್ಯಾ ಅಧ್ಯಕ್ಷರು, ಚುನಾವಣೆ ಸಮಯದಲ್ಲಿ ನಿಮ್ಮ ಹತ್ಯೆಗೆ ಪ್ರಯತ್ನ ನಡೆದಿದೆ. ಇದನ್ನು ನೋಡಿದ ನಂತರ ನಾವು ವಿಚಲಿತರಾದೆವು. ಆದರೆ ನೀವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ ಎಂದು ಎನ್ನುತ್ತಾರೆ.

ಅದಕ್ಕೆ ಟ್ರಂಪ್​​ ಹೌದು ನಾನು ಅದೃಷ್ಟಶಾಲಿ ಎಂದು ಪ್ರತಿಕ್ರಿಯಿಸುತ್ತಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಗುಂಡಿನ ದಾಳಿಗೊಳಗಾಗಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net