ಕಾಸರಗೋಡು: ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಉಪ್ಪಳ ಐಲ ಕುದುಪುಲ ನಿವಾಸಿ ಧನ್ಯಶ್ರೀ(19)ಮೃತಪಟ್ಟಿದ್ದಾರೆ. ಹನ್ನೆರಡು ದಿನಗಳ ಹಿಂದೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು. ಹೊಟ್ಟೆನೋವು ಮತ್ತೆ ಮರುಕಳಿಸಿರುವುದರಿಂದ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸುವ ಮಧ್ಯೆ, ತಾನು ವಿಷ ಸೇವಿಸಿರುವುದಾಗಿ ತಿಳಿಸಿದ್ದಳು.
ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಯುವತಿಯನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದಾಗ ಕಿಡ್ನಿ ಹಾಗೂ ಕರುಳಿಗೆ ಹೆಚ್ಚಿನ ಹಾನಿಯಾಗಿರುವುದರಿಂದ ಜೀವ ಉಳಿಸುವುದು ಕಷ್ಟಸಾಧ್ಯ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಭಾನುವಾರ ಕಾಸರಗೋಡಿನ ಆಸ್ಪತ್ರೆಗೆ ತಂದು ದಾಖಲಿಸಲಾಗಿದ್ದು, ಬುಧವಾರ ಮೃತಪಟ್ಟಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.