

ಯಾದಗಿರಿ: ಉಡುಪಿ ಜಿಲ್ಲೆಯ ಯುವಕ ಶರತ್ ಮೃತಪಟ್ಟರೂ ಯುವ ಜನಾಂಗ ಮಾತ್ರ ಇನ್ನು ಎಚ್ಚೆತ್ತುಕೊಳ್ಳದೇ ಹುಚ್ಚಾಟ ಮುಂದುವರಿಸಿರುವುದು ಕಳವಳಕಾರಿಯಾಗಿದೆ. ಭಾರೀ ಮಳೆಯಿಂದ ರಾಜ್ಯದಲ್ಲಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಫೋಟೋ-ವಿಡಿಯೋ ಕ್ರೇಜ್ಗೆ ಮುಂದಾಗಿರುವ ಯುವ ಜನಾಂಗ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಕೊಟಗೇರಾ ಗ್ರಾಮದ ಹೊರವಲಯದಲ್ಲಿರುವ ಸೂರಜ್ ಮಿನಿ ಫಾಲ್ಸ್ನಲ್ಲಿ ಯುವಕರು ದುಸ್ಸಾಹಸಕ್ಕೆ ಇಳಿಯುತ್ತಿರುವ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ಪ್ರಾಣದ ಹಂಗು ತೊರೆದು ಪೋಟೋ ಕ್ರೇಜ್ಗಾಗಿ ಯುವಕ-ಯುವತಿಯರು ಮಿನಿ ಫಾಲ್ಸ್ ಆಳಕ್ಕೆ ಇಳಿತ್ತಿದ್ದಾರೆ.
ಸತತ ಮಳೆಯಿಂದಾಗಿ ಸೂರಜ್ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಫಾಲ್ಸ್ನ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಕಳೆದ ಒಂದು ವಾರದಿಂದ ಪ್ರವಾಸಿಗರು ದಂಡು ಹರಿದು ಬರುತ್ತಿದೆ. ಫೋಟೋಗಾಗಿ ಬಂಡೆಗಳ ಮೇಲಿಂದ ಕೆಳಗಿಳಿದು ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಬಂಡೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಬೃಹತ್ ಬಂಡೆಗಳಲ್ಲಿ ಪಾಚಿ ಕಟ್ಟಿದೆ. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಉಡುಪಿಯಲ್ಲೂ ಶರತ್ ಇದೇ ಪಾಚಿಗೆ ಕಾಲು ಜಾರಿ ಮೃತಪಟ್ಟಿದ್ದ. ಆತನ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇಷ್ಟಾದರೂ ಸಹ ಕೆಲವರು ಇನ್ನು ಬುದ್ಧಿ ಕಲಿಯದಿರುವುದು ವಿಪರ್ಯಾಸವೇ ಸರಿ. (ದಿಗ್ವಿಜಯ ನ್ಯೂಸ್)