ಆಸ್ಪತ್ರೆಗೆ ವೃದ್ಧೆ ಹೊತ್ತೊಯ್ದ ಯುವಕರು!

gan (6)
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ತುರ್ತಾಗಿ ಚಿಕಿತ್ಸೆಗೆಂದು ವೃದ್ಧೆಯೊಬ್ಬರನ್ನು ರಸ್ತೆ ಸಂಪರ್ಕ ಇಲ್ಲದ ಮನೆಯಿಂದ ಆಸ್ಪತ್ರೆ ತನಕ ಎತ್ತಿಕೊಂಡು ಬಂದ ಘಟನೆ ಮರಂತೆಯಲ್ಲಿ ಸೋಮವಾರ ಸಂಜೆ ನಡೆದಿದೆ.

ಮರವಂತೆಯ ನಿವಾಸಿ ಹಾಗೂ ಅಂಗನವಾಡಿಯ ನಿವೃತ್ತ ಶಿಕ್ಷಕಿ ಸರೋಜಾ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಸೂಕ್ತ ರಸ್ತೆ ಸಂಪರ್ಕವಿಲ್ಲದೇ ಇದ್ದುದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ಅಸಾಧ್ಯವಾಗಿತ್ತು. ಈ ವಿಚಾರ ತಿಳಿದ ಮರವಂತೆಯ ಸಂಗಮ ಯುವಕ ಮಂಡಲದ ಉಪಾಧ್ಯಕ್ಷ ಕಿಶನ್ ಪೂಜಾರಿ, ಸದಸ್ಯ ರಾಘವೇಂದ್ರ ದೇವಾಡಿಗ ಅವರು ಅರ್ಧ ಕಿ.ಮೀ. ದೂರದ ತನಕ ಅಜ್ಜಿಯನ್ನು ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಅಪಾಯಕಾರಿ ತೋಡುಗಳು

ಮರವಂತೆ ಗ್ರಾಮದ ಬೊಬ್ಬರ್ಯ ದೇವಸ್ಥಾನದ ಸಮೀಪ ಹೊಸ ರಸ್ತೆ ನಿರ್ಮಾಣವಾಗಿದೆ. ಆದರೆ ಶಿಕ್ಷಕಿ ಸರೋಜಾ ಅವರ ಮನೆಗೆ ತೆರಳಲು ತೋಡುಗಳನ್ನು ದಾಟಿಕೊಂಡೇ ಹೋಗಬೇಕಿದೆ. ಮಳೆಗಾಳದಲ್ಲಿ ಈ ತೋಡುಗಳು ಉಕ್ಕಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ದಾಟಿಕೊಂಡು ಹೋಗುವುದೇ ಅಪಾಯಕಾರಿ ಎಂದು ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಪಟಗಾರ್ ತಿಳಿಸಿದ್ದಾರೆ.

ಮಾರ್ಗ ಸಂಪರ್ಕವೇ ಕನಸು

ಬಹಳ ಸಮಸ್ಯೆಗಳಿರುವ ಮರವಂತೆಯ ರಾ.ಹೆ.66ರ ಪೂರ್ವ ಭಾಗದಲ್ಲಿ ರಸ್ತೆ ವ್ಯವಸ್ಥೆಯೇ ಇಲ್ಲ. ಅಭಿವೃದ್ಧಿಯಂತೂ ಮರೀಚಿಕೆಯಾಗಿದ್ದು, ಮರವಂತೆ ಗ್ರಾಮಸ್ಥರು ಈ ಕುರಿತು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net