

ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವಕನನ್ನು ನಂಬಿ, ಆತನಿಗೆ ದೇಹವನ್ನು ಅರ್ಪಿಸಿ, ಮದುವೆ ಆಗಲು ಎದುರು ನೋಡುತ್ತಿದ್ದ ಯುವತಿಗೆ ಇದೀಗ ಭಾರೀ ಆಘಾತವಾಗಿದೆ. ಸಂತ್ರಸ್ತೆಯಿಂದ ತನಗೆ ಬೇಕಾದ ಎಲ್ಲವನ್ನು ಪಡೆದುಕೊಂಡ ಆರೋಪಿ ಇದೀಗ ನಾಪತ್ತೆಯಾಗಿದ್ದಾನೆ. ಹಣ ಜೊತೆಗೆ ಕನ್ಯತ್ವವನ್ನು ಕಳೆದುಕೊಂಡ ಯುವತಿ ಇದೀಗ ಠಾಣೆಯ ಮೆಟ್ಟಿಲೇರಿದ್ದಾಳೆ.
ಈ ಪ್ರಕರಣ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಬಲ್ ಎಂಬ ಡೇಟಿಂಗ್ ಆ್ಯಪ್ನಲ್ಲಿ ಸಂತ್ರಸ್ತ ಯುವತಿ, ಸಂಗಾತಿಗಾಗಿ ಹುಡುಕುತ್ತಿದ್ದಳು. ಈ ವೇಳೆ ಅನಿರುದ್ದ್ ಎಂಬಾತನ ಪ್ರೊಫೈಲ್ನಿಂದ ಮೆಸೇಜ್ ಬಂದಿದೆ. ಬಳಿಕ ಇಬ್ಬರ ನಡುವೆ ಚಾಟಿಂಗ್ ಆರಂಭವಾಗಿದೆ. ಮೆಸೇಜ್ ಮೂಲಕವೇ ಯುವತಿಯನ್ನು ಅನಿರುದ್ಧ್ ಪುಸಲಾಯಿಸಿದ್ದ. ಆತನನ್ನೇ ಮದುವೆಯಾಗುವುದಾಗಿ ಯುವತಿ ನಿಶ್ಚಯ ಮಾಡಿಕೊಂಡಿದ್ದಳು. ಆದರೆ, ಮುಖಾಮುಖಿ ಭೇಟಿಯಾದಾಗ ಯುವತಿಗೆ ಭಾರೀ ಶಾಕ್ ಕಾದಿತ್ತು.
ಯಾವುದು ಆ ಶಾಕ್ ಅಂದರೆ, ಆ್ಯಪ್ನಲ್ಲಿ ಮೆಸೇಜ್ ಮಾಡುತ್ತಿದ್ದ ಅನಿರುದ್ಧ್ ಹಿಂದುವಲ್ಲ, ಬದಲಾಗಿ ಆತ ಮುಸ್ಲಿಂ ಎಂಬುದು ಗೊತ್ತಾಗಿದೆ. ಆತನ ನಿಜ ನಾಮಧೇಯ ಮುದಾಸಿರ್. ಮುಖವಾಡ ಕಳಚಿಬಿದ್ದ ಬಳಿಕ ಸಂತ್ರಸ್ತೆ ಶಾಕ್ನಲ್ಲಿದ್ದಳು. ಈ ವೇಳೆ ಆತ ನೀನು ನನ್ನನ್ನ ಪ್ರೀತಿಸುವುದಿಲ್ಲ ಅಂತ ಸುಳ್ಳು ಹೇಳಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಮನವೊಲಿಸಿದ್ದ. ನಂತರ ಸಂತ್ರಸ್ತೆ ಸಹ ಒಪ್ಪಿಕೊಂಡಳು. ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ತನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಯುವತಿ ಬಳಿ 1 ಲಕ್ಷ ರೂ. ಹಣ ಪೀಕಿದ್ದ.
ಈ ಮಧ್ಯೆ ನಾನು ನನ್ನ ತಮ್ಮನನ್ನು ನೋಡಲು ದುಬೈಗೆ ಹೋಗಿ ಬರುತ್ತೇನೆಂದು ಕಥೆ ಕಟ್ಟಿದ್ದ. ಇದಾದ ಮೂರ್ನಾಲ್ಕು ದಿನಗಳ ನಂತರ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಮತ್ತೆ ಆಘಾತಕ್ಕೆ ಒಳಗಾದ ಸಂತ್ರಸ್ತೆ ಮುದಾಸಿರ್ ಸಹೋದರನನ್ನ ಸಂಪರ್ಕಿಸಿದ್ದಾಳೆ. ಮುದಾಸಿರ್ನ ತಾಯಿ ತೀರಿ ಹೋಗಿಲ್ಲ ತಾಯಿ ಕಾಶ್ಮೀರದಲ್ಲಿ ವಾಸ ಮಾಡಿಕೊಂಡಿದ್ದಾರೆ ಮತ್ತು ಮುದಾಸಿರ್ ಬೆಂಗಳೂರಲ್ಲೇ ವಾಸ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಮಾಹಿತಿ ಪಡೆದ ಯುವತಿ ಮನೆ ಬಳಿ ಹೋದಾಗ ಮತ್ತೊಂದು ಆಘಾತ ಕಾದಿತ್ತು. ಅದೇನೆಂದರೆ ಮುದಾಸಿರ್ಗೆ ಈಗಾಗಲೇ ಮದುವೆಯಾಗಿದ್ದು, ಬೆಂಗಳೂರಿನಲ್ಲೇ ಹೆಂಡತಿ ಜೊತೆ ವಾಸವಿದ್ದಾನೆ. ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)