

ಮೆಲ್ಬೋರ್ನ್: ಆಸ್ಟ್ರೆಲಿಯಾ ಮತ್ತು ಪ್ರವಾಸಿ ಪಾಕಿಸ್ತಾನ ತಂಡಗಳ ನಡುವೆ ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಜಿದ್ದಾಜಿದ್ದಿನ ಸ್ಪರ್ಧೆಯೊಂದಿಗೆ ಸಾಗುತ್ತಿದೆ. ಪಂದ್ಯದ 2ನೇ ದಿನದಾಟ ಕುತೂಹಲಕರವಾಗಿಯೂ ಇತ್ತು. ಆದರೆ ಈ ನಡುವೆ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಯುವ ಪ್ರೇಮಿಗಳಿಬ್ಬರು ಕ್ರಿಕೆಟ್ ಆಟ ನೋಡುವುದನ್ನು ಮರೆತು ರೋಮ್ಯಾನ್ಸ್ ಮೂಡ್ನಲ್ಲಿದ್ದರು. ಅವರ ಈ ರೋಮ್ಯಾನ್ಸ್ ಕ್ಯಾಮರಾದಲ್ಲಿ ಸೆರೆಯಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಇಬ್ಬರೂ ಕಕ್ಕಾಬಿಕ್ಕಿಯಾಗಿದ್ದು, ಈ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹತೇಕ ಖಾಲಿಯಾಗಿದ್ದ ಗ್ಯಾಲರಿಯಲ್ಲಿ ಯುವ ಪ್ರೇಮಿಗಳು ತಮ್ಮದೇ ಲೋಕದಲ್ಲಿದ್ದರು. ಸೀಟ್ನಲ್ಲಿ ಕುಳಿತಿದ್ದ ಹುಡುಗನ ತೊಡೆಯ ಮೇಲೆ ಹುಡುಗಿ ತಲೆಇಟ್ಟು ಮಲಗಿದ್ದಳು. ಪಂದ್ಯವನ್ನು ನೇರಪ್ರಸಾರ ಮಾಡುತ್ತಿದ್ದ ಪ್ರಸಾರ ವಾಹಿನಿಯ ಕ್ಯಾಮರಾಮನ್ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅಲ್ಲದೆ, ಸ್ಟೇಡಿಯಂನ ದೈತ್ಯ ಪರದೆಯಲ್ಲೂ ಇದನ್ನು ಪ್ರಸಾರ ಮಾಡಿದ್ದಾರೆ.
ಈ ವೇಳೆ ಕ್ಯಾಮರಾದಲ್ಲಿ ತಾವು ಸೆರೆಯಾಗುತ್ತಿರುವುದನ್ನು ಗಮನಿಸಿದ ಪ್ರೇಮಿಗಳು ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಬಳಿಕ ಅವರು ಸ್ಟ್ಯಾಂಡ್ ಮೇಲಿನಿಂದ ಕೆಳಗೆ ಓಡಿ ಬಂದರು. ಮೈದಾನದಲ್ಲಿದ್ದ ಇತರ ಪ್ರೇಕ್ಷಕರು ಈ ದೃಶ್ಯವನ್ನು ಆನಂದಿಸಿದರು.