

ಸೆಂಚುರಿಯನ್: ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಏಕದಿನ ಕ್ರಿಕೆಟ್ನಲ್ಲಿ ಯಶಸ್ವಿಯಾಗಿ ಕಂಬ್ಯಾಕ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿಯೂ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಕಣಕ್ಕಿಳಿದ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಕೆಎಲ್ ರಾಹುಲ್ (101 ರನ್, 137 ಎಸೆತ, 14 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಮೂಲಕ ಶತಕ ಸಿಡಿಸಿ ಮಿಂಚಿದ್ದಾರೆ. 2ನೇ ದಿನದಾಟದ ಬೆನ್ನಲ್ಲೇ ಅವರು ತನ್ನ ಯಶಸ್ಸಿನ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ.
ಕೆಎಲ್ ರಾಹುಲ್ ಇತ್ತೀಚೆಗಿನ ವರ್ಷಗಳಲ್ಲಿ ಅತಿಹೆಚ್ಚು ಟ್ರೋಲ್ಗಳಿಗೆ ಒಳಗಾಗಿರುವ ಕ್ರಿಕೆಟಿಗರಾಗಿದ್ದಾರೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ರಾಹುಲ್, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಮೂಲಕ ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ.
"ಜನರು ತಮಗೆ ತೋಚಿದ್ದನ್ನು ಹೇಳುತ್ತಿರುತ್ತಾರೆ. ನಾವು ಸಾರ್ವಜನಿಕ ಜೀವನದಲ್ಲಿ ಇರುವಾಗ, ನಮ್ಮ ನಿರ್ವಹಣೆ ಒಂದೇ ನಾವು ಟೀಕೆಗಳಿಂದ ಪಾರಾಗಲು ಇರುವ ಮಾರ್ಗವಾಗಿದೆ' ಎಂದು ರಾಹುಲ್ ಹೇಳಿದ್ದಾರೆ. ರಾಹುಲ್ ಇನಿಂಗ್ಸ್ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದ ಅಗ್ರ 10 ಶತಕಗಳಲ್ಲಿ ಒಂದು ಎಂಬ ದಿಗ್ಗಜ ಸುನೀಲ್ ಗಾವಸ್ಕರ್ ಪ್ರಶಂಸೆಗೆ ಪ್ರತಿಕ್ರಿಯಿಸಿರುವ 31 ವರ್ಷದ ರಾಹುಲ್, ಅವರು ಹಾಗೆ ಹೇಳಿದ್ದರೆ ಅದು ನಿಜಕ್ಕೂ ಅತಿದೊಡ್ಡ ಮೆಚ್ಚುಗೆಯಾಗಿದೆ ಎಂದಿದ್ದಾರೆ.