ಮೈ-ಬೆಂ ಹೆದ್ದಾರಿಯಲ್ಲಿ ಅಪಘಾತ: ನಟ ಲೋಕೇಶ್ ಸಾವು​, ನಿನ್ನೆಯಷ್ಟೇ ಹೊಸ ಬೈಕಿನ ರೀಲ್ಸ್​ ಪೋಸ್ಟ್​ ಮಾಡಿದ್ದರು

Actor-Lokesh
Published on

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತಗಳ ಸರಣಿ ಮುಂದುವರಿದಿದೆ. ಇಂದು ಮುಂಜಾನೆ ಸಂಭವಿಸಿದ ಬೈಕ್​ ಅಪಘಾತದಲ್ಲಿ ಯುವ ನಟ ಲೋಕೇಶ್​ (38) ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಮಂಡ್ಯ ತಾಲೂಕಿನ ಹುಲಿಯೂರು ಬಳಿ ನಡೆದಿದೆ.

ಲೋಕೇಶ್​ ಅವರು ಬೆಂಗಳೂರಿನಿಂದ ಮೈಸೂರಿನ ಕಡೆಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಪಾರ್ಕ್​ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆ ಎಷ್ಟಿದೆ ಅಂದರೆ, ಲೋಕೇಶ್​ ಅವರ ಮೃತದೇಹ ಎರಡು ಕೈ, ಎರಡು ಕಾಲು ತುಂಡಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕಾರಿನ ನಂಬರ್​ ಪ್ಲೇಟ್​ ಸಹ ದೊರಕಿದೆ. ಆದರೆ, ಕಾರು ನಾಪತ್ತೆಯಾಗಿದ್ದು, ಅದರ ಹುಡುಕಾಟದಲ್ಲಿ ಪೊಲೀಸರು ಬಿಜಿಯಾಗಿದ್ದಾರೆ.

ಅಂದಹಾಗೆ ಮೃತ ಲೋಕೇಶ್​ ಅವರು ಚಾಮರಾಜನಗರದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗ್ರಾಮದವರು. ಇವರಿಗೆ ಸಿನಿಮಾ ಕ್ಷೇತ್ರದ ಮೇಲೆ ತುಂಬಾ ಒಲವಿತ್ತು. ಈ ಕ್ಷೇತ್ರದಲ್ಲಿ ಏನಾದರೂ ಒಂದನ್ನು ಸಾಧಿಸುವ ಹಂಬಲವನ್ನು ಹೊಂದಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತೆಂದು ಕಾಣಿಸುತ್ತದೆ. ಭೀಕರ ಅಪಘಾತದಲ್ಲಿ ಲೋಕೇಶ್​ ಅಸುನೀಗಿದ್ದು, ಅವರ ಆಸೆಗಳು ಅವರೊಂದಿಗೆ ಕಮರಿ ಹೋಗಿದೆ.

ಲೋಕೇಶ್​ ಅವರು ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದರು. ಹಲವು ಕಲಾ ನಿರ್ದೇಶಕರ ಜತೆ ಕೆಲಸ ಮಾಡಿದ್ದರು. ಫ್ಯಾಮಿಲಿ ಪ್ಯಾಕ್​ ಚಲನಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಹೊಸಬೈಕ್​ ಖರೀದಿ ಮಾಡಿದ್ದ ಲೋಕೇಶ್​, ಶುಕ್ರವಾರ ಸಂಜೆ ರೀಲ್ಸ್​ ಮಾಡಿ ಪೋಸ್ಟ್​ ಮಾಡಿದ್ದರು. ಆದರೆ, ಅದೇ ಬೈಕ್​ನಲ್ಲಿ ಅವರ ಪ್ರಾಣ ಹೋಗಿರುವುದು ದುರಂತವೇ ಸರಿ. ಶುಕ್ರವಾರ ತಡರಾತ್ರಿ ಊರಿಗೆ ಹೊರಡುವಾಗ ಮುಂಜಾನೆ ವೇಳೆ ಮಂಡ್ಯದ ಬಳಿ ಅಪಘಾತವಾಗಿದೆ. ಲೋಕೇಶ್​ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಲೋಕೇಶ್​ ಅವರ ಸಾವು ಕುಟುಂಬಕ್ಕೆ ಭಾರೀ ಆಘಾತವನ್ನು ಉಂಟು ಮಾಡಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net