

ಬೆಳಗಾವಿ: ಇಂದು(ಶುಕ್ರವಾರ) ತಡರಾತ್ರಿ ತನ್ನ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಕಾರಾಗೃಹದಲ್ಲೇ ರಾತ್ರಿ ಕಳೆಯುವಂತಾಗಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಕೇಸ್ನಲ್ಲಿ ಗುರುವಾರ ಸಿಬಿಐ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ವಿನಯ್ ಕುಲಕರ್ಣಿ, ಸದ್ಯ ಬೆಳಗಾವಿಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.
ಹೆಚ್ಚಿನ ತನಿಖೆಗಾಗಿ ತನ್ನ ಕಸ್ಟಡಿಗೆ ಆರೋಪಿ ವಿನಯ್ ಕುಲಕರ್ಣಿಯನ್ನು ನೀಡುವಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಕೋರ್ಟ್ಗೆ ಮನವಿ ಮಾಡಿದ್ದರು. ಸಿಬಿಐ ಅರ್ಜಿಗೆ ವಿನಯ್ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ವಾದ-ವಿವಾದ ಆಲಿಸಿದ್ದ ನ್ಯಾಯಾಲಯ, ತೀರ್ಪು ಕಾಯ್ದಿರಿಸಿತ್ತು. ಸಂಜೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ವಿನಯ್ ಕುಲಕರ್ಣಿಯನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಪಡೆಯುವಂತೆ ಸೂಚಿಸಿದ್ದರು.
ಆದರೆ, ಕೇಂದ್ರ ಕಾರಾಗೃಹದ ನಿಯಮದ ಪ್ರಕಾರ ಸಂಜೆ 6.15ಕ್ಕೆ ಹಿಂಡಲಗಾ ಜೈಲಿನ ನಂತರ ಯಾರನ್ನೂ ವಿಚಾರಣೆ ಇಲ್ಲವೇ ಇನ್ನಾವುದೇ ಕಾರಣಕ್ಕೂ ಹೊರಬಿಡುವಂತಿಲ್ಲ. ಹೀಗಾಗಿ ಹಸ್ತಾಂತರಿಸುವ ಅವಕಾಶವಿಲ್ಲ. ಸಿಬಿಐ ಅಧಿಕಾರಿಗಳಿಗೆ ತನಿಖೆಯ ದೃಷ್ಟಿಯಿಂದ ಅನಿವಾರ್ಯ ಎಂದಾದರೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅವರ ಆದೇಶದಂತೆ ಕ್ರಮ ಜರುಗಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ವೇಳೆ ಕೈದಿಗಳನ್ನು ಹಸ್ತಾಂತರಿಸದಂತಿರುವ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ನಿಯಮಾವಳಿಯಿಂದಾಗಿ ಸಿಬಿಐ ಅಧಿಕಾರಿಗಳು ಶನಿವಾರ ಬೆಳಗ್ಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಶುಕ್ರವಾರ ತಡರಾತ್ರಿ ತಮ್ಮ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಸಚಿವರು ಕಾರಾಗೃಹದಲ್ಲಿಯೇ ರಾತ್ರಿ ಕಳೆಯುವಂತಾಗಿದೆ.