

ಕಾರ್ಕಳ: ದೈನಂದಿನ ಜೀವನದಲ್ಲಿ ಎಲ್ಲರೂ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು, ಆರೋಗ್ಯ ಎನ್ನುವುದು ಬದುಕಿರುವವರೆಗೆ ಬಹಳ ಮುಖ್ಯ, ಆರೋಗ್ಯ ಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ ಎಂದು ಕಾರ್ಕಳ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯ ವಿನಾಯಕ ಕುಡ್ವ ಹೇಳಿದರು.
ಕಾರ್ಕಳ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಮಾತನಾಡಿ, ಯೋಗ ಎಂದರೆ ಕೇವಲ ವ್ಯಾಯಾಮವಲ್ಲ, ನಾವು ಶ್ರದ್ಧಾ ಭಕ್ತಿಯಿಂದ ನಮ್ಮ ದೇಹಕ್ಕೆ ಕೆಲಸವನ್ನು ಕೊಡುತ್ತಾ ಪರಮಾತ್ಮನಲ್ಲಿ ಲೀನವಾಗಬೇಕು. ಅದುವೇ ನಿಜವಾದ ಯೋಗ ಎಂದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಾಜ್ಯಮಟ್ಟದ ಯೋಗಪಟು ನಿಖಿಲ್ ಪೂಜಾರಿ ಯೋಗ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗ ಶಿಕ್ಷಕಿ ಕುಮಾರಿ ನೃತ್ಯ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಜೋತ್ಸ್ನಾ ಸ್ನೇಹಲತಾ, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್, ಪ್ರಕಾಶ್ ನಾಯ್ಕ ಹಾಗೂ ಲಾವಣ್ಯ ಉಪಸ್ಥಿತರಿದ್ದರು. ಸಂಸ್ಥೆಯ ಪ್ರೌಢಶಾಲಾ ಶಿಕ್ಷಕಿ ಅಶ್ವಿನಿ ಪೈ ಕಾರ್ಯಕ್ರಮ ನಿರೂಪಿಸಿದರು.