

ಸನ್ನಾ (ಯಮೆನ್): ಹಿಜಬ್ ಧರಿಸದೇ ಫೋಟೋಶೂಟ್ ಮಾಡಿದ್ದಕ್ಕಾಗಿ ಯಮೆನ್ ದೇಶದ ಮಾಡೆಲ್ ಒಬ್ಬಳನ್ನು ಹೌತಿ ಉಗ್ರರು ಅಪಹರಿಸಿದ್ದಾರೆ.
ಎಂತೆಸಾರ್ ಅಲ್ ಹಮ್ಮಾಡಿ ಎಂಬ 20 ರ ಚೆಲುವೆಯೇ ಅಪಹರಣಕ್ಕೆ ಒಳಗಾದ ಮಾಡೆಲ್. ಇತ್ತೀಚೆಗೆ ಯಮೆನ್ ದೇಶದ ರಾಜಧಾನಿ ಸನ್ನಾ ಎಂಬಲ್ಲಿ ತನ್ನ ಸ್ನೇಹಿತೆಯರ ಜೊತೆ ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ವೇಳೆ ಕಾರ್ ಅಡ್ಡಗಟ್ಟಿದ ಉಗ್ರರು ಎಂತೆಸಾರ್ಳನ್ನು ಎಳೆದೋಯ್ದಿದ್ದಾರೆ.
ಇಸ್ಲಾಂ ನಿಯಮಗಳನ್ನು ಉಲ್ಲಂಘಿಸಿದ್ದಾಳೆ ಎಂದು ಎಂತೆಸಾರ್ ಮೇಲೆ ಉಗ್ರರು ಆರೋಪಿಸಿದ್ದು, ಅವಳನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಯಮೆನ್ ರಕ್ಷಣಾ ಸಚಿವ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಎಂತೆಸಾರ್ ಯಮೆನ್ನಲ್ಲಿ ಇತ್ತೀಚೆಗೆ ತಮ್ಮ ನೇರ ನಡೆ ನುಡಿಗಳಿಂದ ಸಾಕಷ್ಟು ಸದ್ದು ಮಾಡುತ್ತಿದ್ದಾಳೆ. ಇದು ಉಗ್ರರ ಕೆಂಗಣ್ಣಿಗೆ ಕಾರಣವಾಗಿದೆ. ಯಮೆನ್ನಲ್ಲಿ ಇಸ್ಲಾಂ ಸರ್ಕಾರವನ್ನು ಸ್ಥಾಪಿಸಲು ಹೌತಿ ಉಗ್ರರು ಪ್ರಯತ್ನಿಸುತ್ತಿದ್ದಾರೆ.