'ಬೊಂಬೆ ಹೇಳುತೈತೆ' ಮೂಲಕ ಹೊಸ ದಾಖಲೆ ಬರೆದ ಯತಿರಾಜ್

Bombe Helutaithe - Yatiraj - New
Published on

ಬೆಂಗಳೂರು: ಕನ್ನಡದಲ್ಲಿ ಒಂದೇ ಪಾತ್ರಗಳಿರುವ ಎರಡು ಚಿತ್ರಗಳು ಬಂದಿವೆ. 'ಶಾಂತಿ' ಮತ್ತು 'ಬಿಂಬ' ಚಿತ್ರಗಳಲ್ಲಿ ಕೇವಲ ಒಂದೇ ಒಂದು ಪಾತ್ರವಿತ್ತು. ಈಗ ಪತ್ರಕರ್ತ, ನಟ ಮತ್ತು ನಿರ್ದೇಶಕ ಯತಿರಾಜ್​, 'ಬೊಂಬೆ ಹೇಳುತೈತೆ' ಅಂಥದ್ದೇ ಒಂದು ಪ್ರಯತ್ನವನ್ನು ಮಾಡಿದ್ದಾರೆ. ವಿಶೇಷವೆಂದರೆ, ಹಿಂದಿನ ಎರಡು ಚಿತ್ರಗಳನ್ನು ಬೇರೆಯವರು ನಿರ್ದೇಶನ ಮಾಡಿದ್ದಾರೆ. ಆದರೆ, 'ಬೊಂಬೆ ಹೇಳುತೈತೆ' ಚಿತ್ರದಲ್ಲಿ ನಟಿಸುವುದರ ಜತೆಗೆ, ಅದರ ನಿರ್ದೇಶನವನ್ನೂ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ ಯತಿರಾಜ್​.

ಈ ಚಿತ್ರದ ಕುರಿತು ಮಾತನಾಡುವ ಅವರು, '25 ವರ್ಷಗಳ ಹಿಂದೆ ಸಿನಿಮಾದ ಒಂದು ಫ್ರೇಮ್​ನಲ್ಲಿ ಕಾಣಿಸಿಕೊಂಡರೆ ಸಾಕು ಎಂದು ಆಸೆಪಟ್ಟವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈತನಕ ಆರು ಚಿತ್ರಗಳನ್ನು ನಿರ್ದೇಶಿಸಿದ್ಧೇನೆ. ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು, ಅದರಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಇದಕ್ಕೆ ಸ್ಪೂರ್ತಿ ಹಿಂದಿಯಲ್ಲಿ ಸುನಿಲ್ ದತ್ ಹಾಗೂ ತಮಿಳಿನಲ್ಲಿ ಪಾರ್ಥಿಬನ್ ಅವರು ಎಂದರೆ ತಪ್ಪಾಗಲಾರದು. ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್‌ ಮುಂದೆ ಹೇಳಿದಾಗ, ಅವನು 'ಬೊಂಬೆ ಹೇಳುತೈತೆ' ಚಿತ್ರದ ಬಗ್ಗೆ ಹೇಳಿದ. ಈ ಚಿತ್ರದ ಪರಿಕಲ್ಪನೆ ಅವನದೇ. ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು' ಎಂದು ಮಾಹಿತಿ ನೀಡುತ್ತಾರೆ.

'ಬೊಂಬೆ ಹೇಳುತೈತೆ' ಚಿತ್ರದ ಬಹುತೇಕ ಚಿತ್ರೀಕರಣ ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲಿ ಆಗಿದೆಯಂತೆ. ಚಿತ್ರ ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. 'ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳು ಬಂದಿಲ್ಲ ಎಂದು. ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿವೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೆ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಅದರಲ್ಲಿ ನಮ್ಮ‌ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಅವಕಾಶ ನೋಡಿಕೊಂಡು ಮುಂದಿನ ದಿನಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ' ಎನ್ನುತ್ತಾರೆ.

'ಬೊಂಬೆ ಹೇಳುತೈತೆ' ಚಿತ್ರಕ್ಕೆ ವಿದ್ಯಾ ನಾಗೇಶ್ ಅವರ ಛಾಯಾಗ್ರಹಣ, ರಾಜ್ ಭಾಸ್ಕರ್ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net