

ಅಡಿಲೇಡ್: ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದು, 180 ರನ್ಗಳಿಗೆ ಆಲೌಟ್ ಆಗಿದೆ. ಇನ್ನೂ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗಿದ್ದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದ್ದು, ಬೇಡದ ದಾಖಲೆಗಳಿಗೆ ಕೊರಳೊಡಿದ್ದಾರೆ.
ಅಡಿಲೇಡ್ನಲ್ಲಿ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದ ಯಶಸ್ವಿ ಜೈಸ್ವಾಲ್ (Yashasvi Jaiswal) ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಶೂನ್ಯಕ್ಕೆ ಔಟಾಗಿದ್ದಾರೆ. ಒಟ್ಟು ಮೂರು ಬಾರಿ ಶೂನ್ಯಕ್ಕೆ ಔಟಾಗಿರುವ ಯಶಸ್ವಿ ಜೈಸ್ವಾಲ್ ಗೋಲ್ಡನ್ ಡಕ್ ಆಗಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಯಶಸ್ವಿ ಜೈಸ್ವಾಲ್ (Yashasvi Jaiswal) ಅವರು ಪಿಂಕ್ ಬಾಲ್ ಟೆಸ್ಟ್ನಲ್ಲಿ ಮೊದಲ ಎಸೆತದಲ್ಲಿ ಔಟಾದ ವಿಶ್ವದ ಮೂರನೇ ಆರಂಭಿಕ ಆಟಗಾರ ಮತ್ತು ಭಾರತದ ಮೊದಲ ಆಟಗಾರ ಎಂಬ ಬೇಡದ ಅಪಕೀರ್ತಿಗೆ ಪಾತ್ರರಾಗಿದ್ದಾರೆ. ಅಹರ್ನಿಶಿ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ ಗೋಲ್ಡನ್ ಡಕ್ಗೆ ಔಟಾದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಆರ್ ಅಶ್ವಿನ್ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಹರ್ನಿಶಿ ಟೆಸ್ಟ್ನಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು.
ಚೇತೇಶ್ವರ ಪೂಜಾರ, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಅಶ್ವಿನ್, ಉಮೇಶ್ ಯಾದವ್ ಸೇರಿದಂತೆ 8 ಭಾರತೀಯ ಆಟಗಾರರು ಪಿಂಕ್ ಬಾಲ್ ಟೆಸ್ಟ್ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದೀಗ ಈ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ. ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಯಶಸ್ವಿ ಜೈಸ್ವಾಲ್ (Yashasvi Jaiswal) ಬೇಡದ ದಾಖಲೆಗಳಿಗೆ ಕೊರಳೊಡ್ಡಿದ್ಧಾರೆ.