ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಘೋಷಣೆ ಇಲ್ಲ; ಅಭಿಮಾನಿಗಳಿಗೆ 'ರಾಕಿಂಗ್​ ಸ್ಟಾರ್' ಪತ್ರ

Yash 5
Published on

ಬೆಂಗಳೂರು: ಯಶ್​ ಹುಟ್ಟುಹಬ್ಬಕ್ಕೆ (ಜನವರಿ 8) ಅವರ ಹೊಸ ಚಿತ್ರದ ಘೋಷಣೆಯಾಗಬಹುದು ಎಂದು ಅವರ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಅದು ಸುಳ್ಳಾಗುತ್ತಿರುವಂತೆ ಕಾಣುತ್ತಿದೆ. ಯಶ್​ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೇ, ಯಾವುದೇ ಹೊಸ ಚಿತ್ರದ ಘೋಷಣೆಯೂ ಆಗುತ್ತಿಲ್ಲ.

ಹಾಗಂತ ಖುದ್ದು ಯಶ್​ ಹೇಳಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಎರಡು ದಿನಗಳಿವೆ ಎನ್ನುವಾಗ ಸೋಷಿಯಲ್​ ಮೀಡಿಯಾದಲ್ಲಿ ಪತ್ರ ಬರೆದಿರುವ ಅವರು, ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, 'ನಾನು ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು, ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ, ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ. ಕ್ಷಮಿಸಿ, ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರತ್ಯಕ್ಷವಾಗಿಯೇ ಈ ಬಾರಿ ಏನೂ ನಿರೀಕ್ಷಿಸಬೇಡಿ ಎಂದು ಅಭಿಮಾನಿಗಳಿಗೆ ಅವರು ಹೇಳಿದ್ದಾರೆ.

ಯಶ್​ ಅಭಿನಯದ 'ಕೆಜಿಎಫ್​ 2' ಚಿತ್ರವು ಕಳೆದ ವರ್ಷದ ಏಪ್ರಿಲ್​ 14ರಂದು ಬಿಡಗುಡೆಯಾಗಿತ್ತು. ಆ ನಂತರ ಯಶ್​ ಅಭಿನಯದ ಯಾವೊಂದು ಹೊಸ ಚಿತ್ರದ ಘೋಷಣೆಯೂ ಆಗಿಲ್ಲ. ಯಶ್​ ಮುಂದಿನ ನಡೆಯೇನು ಎಂದು ಅವರ ಹುಟ್ಟುಹಬ್ಬದಂದಾದರೂ ಗೊತ್ತಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ಈ ಪತ್ರದಿಂದ ನಿರಾಸೆಯಾಗಿರುವುದಂತೂ ಹೌದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net