

ವಿಜಯವಾಣಿ ಸುದ್ದಿಜಾಲ ಸುಳ್ಯ
ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಲೆಯ ಮೂಲಕ ಭಾಷೆ ಬೆಳೆಯಬೇಕು ಎಂಬ ದೃಷ್ಟಿಯಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ಆಯೋಜಿಸಲಾದ ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೆಹರು ಮೆಮೋರಿಯಲ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ವಿ.ದಾಮೋದರ ಗೌಡ ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ಹಿಂಗಾರವನ್ನು ಬಿಡುಗಡೆ ಮಾಡಿದರು. ಕಲಾವಿದ ಜಬ್ಬಾರ್ ಸಮೋ ಮತ್ತು ಭಾಗವತಿಕೆ ಪ್ರತಿಭೆ ಭವ್ಯಶ್ರೀ ಕುಲ್ಕುಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪ್ರೊ.ದಾಮೋದರ ಗೌಡ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಡಾ.ಜ್ಞಾನೇಶ್ ಎನ್.ಎ., ಚಂದ್ರಾವತಿ ಬಡ್ಡಡ್ಕ, ತೇಜಕುಮಾರ್ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ವಿನೋದ್ ಮೂಡಗದ್ದೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸದಸ್ಯ ಸಂಚಾಲಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.