ನವೆಂಬರ್​ನಲ್ಲಿ ಡಬ್ಲ್ಯುಪಿಎಲ್​ ಮೆಗಾ ಹರಾಜು; ತಂಡಗಳಿಗೆ ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶ!

web wpl auc
Published on

ನವದೆಹಲಿ: ಮುಂಬರುವ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) 4ನೇ ಆವೃತ್ತಿಗೆ ಮುನ್ನ ನವೆಂಬರ್​ 25ರಿಂದ 29ರ ನಡುವೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೆ ಮುನ್ನ ಎಲ್ಲ 5 ತಂಡಗಳಿಗೆ ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಂಡಗಳು ನವೆಂಬರ್​ 5ಕ್ಕೆ ಮುನ್ನ ರಿಟೇನ್​ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

ತಂಡಗಳು ರಿಟೇನ್​ ಮಾಡಿಕೊಳ್ಳುವ ಐವರು ಆಟಗಾರ್ತಿಯರಲ್ಲಿ ಗರಿಷ್ಠ ಮೂವರಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿರಬೇಕು. ಇನ್ನುಳಿದಂತೆ ಇಬ್ಬರು ದೇಶೀಯ ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶವಿದೆ. ತಂಡವೊಂದು ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಳ್ಳಲು ನಿರ್ಧರಿಸಿದರೆ ಆಗ ಅದರಲ್ಲಿ ಕನಿಷ್ಠ ಓರ್ವ ಭಾರತೀಯ ದೇಶೀಯ ಕ್ರಿಕೆಟರ್​ ಇರಬೇಕಾಗುತ್ತದೆ.

ಮೆಗಾ ಹರಾಜಿನಲ್ಲಿ ತಂಡಗಳಿಗೆ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ಗಳನ್ನೂ ಬಳಸಲು ಅವಕಾಶ ನೀಡಲಾಗುತ್ತದೆ. ಇದರಿಂದ 2025ರ ಆವೃತ್ತಿಯಲ್ಲಿ ತಮ್ಮ ತಂಡದ ಭಾಗವಾಗಿದ್ದ ಆಟಗಾರ್ತಿಯರನ್ನು 2026ರ ಆವೃತ್ತಿಗೂ ಉಳಿಸಿಕೊಳ್ಳಲು ಅವಕಾಶ ದೊರೆಯಲಿದೆ. ತಂಡವೊಂದು ಗರಿಷ್ಠ 5 ಆರ್​ಟಿಎಂ ಬಳಸಲು ಅವಕಾಶವಿರುತ್ತದೆ. ಆದರೆ ಐವರು ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಂಡರೆ ಮಾತ್ರ ಒಂದೂ ಆರ್​ಟಿಎಂ ಸಿಗುವುದಿಲ್ಲ. ನಾಲ್ವರ ರಿಟೇನ್​ ಮಾಡಿದರೆ 1 ಆರ್​ಟಿಎಂ, ಮೂವರ ರಿಟೇನ್​ ಮಾಡಿದರೆ 2 ಆರ್​ಟಿಎಂ ಮತ್ತು ಇಬ್ಬರ ರಿಟೇನ್​ ಮಾಡಿದರೆ 3 ಆರ್​ಟಿಎಂ ಮತ್ತು ಒಬ್ಬರ ರಿಟೇನ್​ ಮಾಡಿದರೆ 4 ಆರ್​ಟಿಎಂ ಸಿಗಲಿದೆ.

ಮೆಗಾ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಳ್ಳಲು ಆಟಗಾರ್ತಿಯರಿಗೆ ನ.18 ಕೊನೇ ದಿನವಾಗಿರುತ್ತದೆ ಮತ್ತು ನವೆಂಬರ್​ 20ರಂದು ಬಿಸಿಸಿಐ, ಹರಾಜಿನಲ್ಲಿ ಭಾಗವಹಿಸುವ ಆಟಗಾರ್ತಿಯರ ಪಟ್ಟಿಯನ್ನು ಬಹಿರಂಗಗೊಳಿಸಲಿದೆ.

ಬಜೆಟ್​ 15 ಕೋಟಿ ರೂ.

ತಂಡಗಳು ಆಟಗಾರ್ತಿಯರ ರಿಟೇನ್​ ಮತ್ತು ಹರಾಜಿನ ಖರೀದಿಗೆ ಬಳಸಬಹುದಾದ ಗರಿಷ್ಠ ಬಜೆಟ್​ ಮಿತಿಯನ್ನು 15 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ ಐವರು ಆಟಗಾರ್ತಿಯರ ರಿಟೇನ್​ಗೆ 3.5 ಕೋಟಿ, 2.5 ಕೋಟಿ, 1.75 ಕೋಟಿ, 1 ಕೋಟಿ ಮತ್ತು 50 ಲಕ್ಷ ರೂ. ಸ್ಲ್ಯಾಬ್​ ನಿಗದಿಪಡಿಸಲಾಗಿದೆ. ಇದರಿಂದ ತಂಡವೊಂದು ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಳ್ಳಬೇಕಾದರೆ ಒಟ್ಟು 9.25 ಕೋಟಿ ರೂ. ವ್ಯಯಿಸಬೇಕಾಗುತ್ತದೆ. 4 ಆಟಗಾರ್ತಿಯರಿಗೆ 8.75 ಕೋಟಿ ರೂ, ಮೂವರು ಆಟಗಾರ್ತಿಯರಿಗೆ 7.75 ಕೋಟಿ ರೂ. ಮತ್ತು ಇಬ್ಬರು ಆಟಗಾರ್ತಿಯರಿಗೆ 7.75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇದರ ಹೊರತಾಗಿ ತಂಡಗಳು ಆಟಗಾರ್ತಿಯರ ರಿಟೇನ್​ಗೆ ಹೆಚ್ಚಿನ ಮೊತ್ತವನ್ನೂ ವ್ಯಯಿಸಲು ಅವಕಾಶವಿದ್ದು, ಆ ಹೆಚ್ಚಿನ ಮೊತ್ತವು ಬಜೆಟ್​ನಿಂದ ಕಡಿತಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net