

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದಳು ಎಂಬ ಕಾರಣಕ್ಕೆ ಯುವಕನೋರ್ವ ಅಪ್ರಾಪ್ತ ವಯಸ್ಕಳನ್ನು ಬರ್ಬರವಾಗಿ ಇರಿದು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ಜಿಲ್ಲೆಯ ತೀಸ್ಗಾಂವ್ ಎಂಬ ಪ್ರದೇಶದಲ್ಲಿ ನಡೆದಿದೆ.
ಆದಿತ್ಯ ಕಾಂಬ್ಳೆ(20) ಬಂಧಿತ ಯುವಕ ಎಂದು ತಿಳಿದು ಬಂದಿದೆ. ಹತ್ಯೆ ಮಾಡಿದ ಬಳಿಕ ಈತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂತ್ರಸ್ತೆ ಎಂದಿನಂತೆ ಟ್ಯೂಷನ್ ಮುಗಿಸಿಕೊಂಡು ತನ್ನ ತಾಯಿಯ ಜೊತೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದಾರಿ ಮಧ್ಯೆ ಆರೋಪಿ ಆದಿತ್ಯ ಅವರನ್ನು ಅಡ್ಡಗಟ್ಟಿದ್ದು, ಬಾಲಕಿಗೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಯುವಕನ ನಡವಳಿಕೆಗೆ ಬಾಲಕಿಯ ತಾಯಿ ಆಕ್ಷೇಪಿಸಿದ್ದು, ಅವರನ್ನು ಆರೋಪಿ ತಳ್ಳಿ ಏಕಾಏಕಿ ಚಾಕುವಿನಿಂದ ಸಂತ್ರಸ್ತೆಗೆ 8ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.
ತನ್ನ ಕಣ್ಮುಂದೆಯೇ ಮಗಳನ್ನು ಚುಚ್ಚಿ ಕೊಲೆ ಮಾಡಿದ್ದನ್ನು ಕಂಡು ಆಘಾತಕ್ಕೊಳಗಾದ ಆಕೆಯ ತಾಯಿ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಸಂತ್ರಸ್ತೆಯ ರಕ್ಷಣೆಗೆ ಧಾವಿಸುತ್ತಿದ್ದಂತೆ ಭಯಬೀತನಾದ ಆರೋಪಿಯೂ ಸ್ಥಳದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಂತ್ರಸ್ತೆ ಚಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.