

ಗೋವಾ: ಗೋವಾದ ಪ್ರಸಿದ್ದ ಬೀಚ್ ಕ್ಲಬ್ ಒಂದರಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯವು ಐಪಿಎಸ್ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಎ.ಕೋನ್ ಅಮಾನತ್ತಾದ ಅಧಿಕಾರಿ ಎಂದು ತಿಳಿದು ಬಂದಿದೆ. 2009ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಇವರು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ(AGMUT) ಕೇಡರ್ನ ಅಧಿಕಾರಿಯಾಗಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಗೃಹ ಇಲಾಖೆಯೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಡಿಐಜಿ ಶ್ರೇಣಿಯ ಅಧಿಕಾರಿಯಾಗಿರುವ ಕೋನ್ ಸೋಮವಾರ ತಡರಾತ್ರಿ ಮಹಿಳಾ ಪ್ರವಾಸಿಗರೊಬ್ಬರ ಜೊತೆ ಬೀಚ್ ಕ್ಲಬ್ ಒಂದರಲ್ಲಿ ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ ವರದಿಯನ್ನು ಆಧರಿಸಿ ಕೇಂದ್ರ ಗೃಹ ಇಲಾಖೆ ಕ್ರಮಕೈಗೊಂಡಿದೆ.
ಡಿಐಜಿ ಶ್ರೇಣಿಯ ಅಧಿಕಾರಿಯಾದ ಇವರನ್ನು ಆರಂಭದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು.
ಮಹಿಳೆ ಜೊತೆ ಅಧಿಕಾರಿ ಅಸಭ್ಯವಾಗಿ ವರ್ತಿಸಿದ ವಿಚಾರವನ್ನು ಶಾಸಕರಾದ ವಿಜಯ್ ಸರ್ದೇಸಾಯಿ, ಮೈಕೆಲ್ ಲೋಬೋ ರಾಜ್ಯ ವಿಧಾನಸಭೆ =ಯಲ್ಲಿ ಪ್ರಸ್ತಾಪಿಸಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು.