ಸಕಲರ ದುರಿತ ನಿವಾರಣೆಗೆ ವಿಠ್ಠಲನ ಆರಾಧನೆ

panduranga
ಮುದ್ರಾಡಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರು.
Published on

ಹೆಬ್ರಿ: ಭಾಗವತದಲ್ಲಿ ವಿಠ್ಠಲನ ಮಹಿಮೆ ವರ್ಣನೆ ಇದೆ. ಭಕ್ತಿಯಿಂದ ಭಜಿಸಿ ಸಕಲರ ದುರಿತ ಪರಿಹರಿಸುವ ವಿಠ್ಠಲ ದೇವರ ಆರಾಧನೆ ಮುದ್ರಾಡಿಯಲ್ಲಿ ನಡೆಯುತ್ತಿದೆ. ಲೌಕಿಕ ಆಸೆ, ಆಕಾಂಕ್ಷೆ ಬದಿಗಿಟ್ಟು ನಿರಂತರ ದೇವರ ದರ್ಶನ, ಧ್ಯಾನ, ಸಂಕೀರ್ತನೆಯಲ್ಲಿ ತೊಡಗಿ ಭಗವಂತನ ಕೃಪೆಗೆ ಪಾತ್ರರಾಗಿ ನಿತ್ಯ ಸುಖ, ಶಾಂತಿ, ನೆಮ್ಮದಿ ಬದುಕು ನಮ್ಮದಾಗಿಸಿಕೊಳ್ಳೋಣ ಎಂದು ಮಣಿಪಾಲ ಮುನಿಯಾಲು ಆಯುರ್ವೇದ ಮಹಾವಿದ್ಯಾಲಯ ಉಪಪ್ರಾಂಶುಪಾಲ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಹೇಳಿದರು.

ಬಲ್ಲಾಡಿ ಮಠದಲ್ಲಿ ಇತ್ತೀಚೆಗೆ ಮುದ್ರಾಡಿ ಗ್ರಾಮ ಶ್ರೀ ಪಾಂಡುರಂಗ ವಿಠ್ಠಲ ದೇವರ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು.

ವಿದ್ವಾನ್ ಇರ್ವತ್ತೂರು ವಾಸುದೇವ ಭಟ್, ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಂ.ರಾಘವೇಂದ್ರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತು.

ದೇವರಿಗೆ ಕಲಶಾಭಿಷೇಕ, ಮೂಲ ಮಂತ್ರ ಹೋಮ, ವಿಷ್ಣು ಸಹಸ್ರನಾಮರ್ಚನೆ, ಚಂಡಿಕಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ಅಷ್ಟಾವಧಾನ ಸೇವೆ, ರಂಗಪೂಜೆ ನಡೆಯಿತು. ಶ್ರೀ ಅನಂತಪದ್ಮನಾಭ ಭಜನಾ ಮಂಡಳಿ, ಹೆಬ್ರಿ ಅವರಿಂದ ಲಕ್ಷ್ಮೀಶೋಭಾನೆ ಮತ್ತು ಭಜನಾ ಕಾರ್ಯಕ್ರಮ, ಕರುಣಾಕರ ಸೇರಿಗಾರ ಮುದ್ರಾಡಿ ಮತ್ತು ಸದಾಶಿವ ಸೇರಿಗಾರ ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ, ಬಲ್ಲಾಡಿ ಹಾಗೂ ಶ್ರೀ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ ಅಡ್ಕ ಅವರಿಂದ ಭಜನಾ ಕಾರ್ಯಕ್ರಮ, ಹೆಬ್ರಿ ನಿತ್ಯಾನಂದ ಭಟ್ ಮತ್ತು ಬಳಗದವರಿಂದ ಭಕ್ತಿಗೀತೆ ನಡೆಯಿತು.

ಅರ್ಚಕ ನಾರಾಯಣ ಭಟ್ ಸ್ವಾಗತಿಸಿದರು. ಬಲ್ಲಾಡಿ ಮಧುಸೂದನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net