ಊಟದಲ್ಲಿ ಹುಳು ಹಾಕಿ 25 ಲಕ್ಷಕ್ಕಾಗಿ ಬ್ಲಾಕ್​ಮೇಲ್​: ದೂರು ದಾಖಲಿಸಿದ ರಾಮೇಶ್ವರಂ ಕೆಫೆ! Rameshwaram Cafe

Rameshwaram Cafe
Published on

Rameshwaram Cafe : ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ತನ್ನ ಹೋಟೆಲ್​ನಲ್ಲಿ ಆಹಾರ ಕಲುಷಿತಗೊಂಡಿದೆ ಎಂಬ ಸುಳ್ಳು ಘಟನೆಯನ್ನು ಸೃಷ್ಟಿಸಿ, ಬ್ರ್ಯಾಂಡ್​ಗೆ ಮಸಿ ಬಳಿಯಲು ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಜನರ ಗುಂಪಿನ ವಿರುದ್ಧ ದಕ್ಷಿಣ ಭಾರತದ ಜನಪ್ರಿಯ ರೆಸ್ಟೋರೆಂಟ್ ಬ್ರ್ಯಾಂಡ್ ರಾಮೇಶ್ವರ ಕೆಫೆ ಪೊಲೀಸ್ ದೂರು ದಾಖಲಿಸಿದೆ.

ಗುರುವಾರ (ಜುಲೈ 24) ರಾಮೇಶ್ವರಂ ಕೆಫೆಯ ವಿಮಾನ ನಿಲ್ದಾಣದ ಮಾರಾಟ ಮಳಿಗೆಯಲ್ಲಿ ತನಗೆ ಬಡಿಸಿದ ಊಟದಲ್ಲಿ ಹುಳು ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಮ್ಮ ಆಹಾರದಲ್ಲಿ ಹುಳು ಪತ್ತೆಯಾಗಿರುವ ವಿಡಿಯೋ ಸಹ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ವೈರಲ್ ಆಗಿ, ರಾಮೇಶ್ವರಂ ಕೆಫೆ ವಿರುದ್ಧ ಟೀಕೆಗಳು ಕೇಳಿಬಂದವು.

ಟೀಕೆಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಮೇಶ್ವರಂ ಕೆಫೆಯ ಆಡಳಿತ ಮಂಡಳಿ, ಐದರಿಂದ ಏಳು ವ್ಯಕ್ತಿಗಳ ಗುಂಪೊಂದು ಸಾರ್ವಜನಿಕ ಗೊಂದಲವನ್ನು ಸೃಷ್ಟಿಸಲು ಬಡಿಸಿದ ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಹೊರಿಸಿದೆ ಎಂದು ಹೇಳಿದೆ.

ಗೊಂದಲ ಸೃಷ್ಟಿಸಿದ ವ್ಯಕ್ತಿಗಳು, ಪರಿಹಾರ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದರು. ಸ್ವಲ್ಪ ಸಮಯದ ನಂತರ ನಮಗೆ ಒಂದು ಫೋನ್ ಕರೆ ಬಂದಿತು. ಬ್ರ್ಯಾಂಡ್‌ಗೆ ಹಾನಿಯಾಗದಂತೆ ತಡೆಯಲು 25 ಲಕ್ಷ ರೂ. ಹಣ ನೀಡುವಂತೆ ನಮ್ಮ ಬಳಿ ಬೇಡಿಕೆ ಇಟ್ಟರು ಎಂದು ರಾಮೇಶ್ವರಂ ಕೆಫೆ ಆಡಳಿತ ಮಂಡಳಿ ತಿಳಿಸಿದೆ.

ಈ ಘಟನೆ ಬೆನ್ನಲ್ಲೇ ರಾಮೇಶ್ವರಂ ಕೆಫೆ ಆಡಳಿ ಮಂಡಳಿ, ಕರೆ ದಾಖಲೆಗಳು, ಸಂದೇಶದ ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿ, ದೂರು ದಾಖಲಿಸಿದೆ. ಬ್ಲಾಕ್​ಮೇಲ್​ ಪ್ರಯತ್ನದ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿರುವುದಾಗಿ ತಿಳಿಸಿದೆ.

ಈ ವಿಚಾರವಾಗಿ ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್ ಅವರು ಮಾತನಾಡಿದ್ದು, ತಮ್ಮ ಆಹಾರದಲ್ಲಿ ಹುಳು ಅಥವಾ ಕೀಟ ಕಂಡುಬಂದಿದೆ ಎಂಬ ಆಧಾರರಹಿತ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಆಹಾರ ತಯಾರಿಕೆಯ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಎರಡು ಮಾತೇ ಇಲ್ಲ. ನಾವು ಅತ್ಯಂತ ಕಟ್ಟುನಿಟ್ಟಾದ ಗುಣಮಟ್ಟದ ಶಿಷ್ಟಾಚಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ವಿಶೇಷವಾಗಿ, ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ, ಅಲ್ಲಿ ನಿಯಮಿತ ಲೆಕ್ಕಪರಿಶೋಧನೆಗಳು ಮತ್ತು ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಆದರೆ, ಇಂದು ನಡೆದ ಘಟನೆ ಸ್ಪಷ್ಟವಾಗಿ ಹಣವನ್ನು ಸುಲಿಗೆ ಮಾಡುವ ಮತ್ತು ನಮ್ಮ ಬ್ರ್ಯಾಂಡ್‌ಗೆ ಕಳಂಕ ತರುವ ದುರುದ್ದೇಶಪೂರಿತ ಉದ್ದೇಶದಿಂದ ನಡೆಸಲಾದ ಒಂದು ವ್ಯವಸ್ಥಿತ ಕೃತ್ಯವಾಗಿದೆ ಎಂದು ತಮ್ಮ ಹೇಳಿಕೆಯನ್ನು ದಿವ್ಯಾ ಅವರು ತಿಳಿಸಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಪ್ರಯತ್ನಗಳು ನಡೆದಿವೆ. ಅಲ್ಲಿ ವಿವಿಧ ಸಂದರ್ಭಗಳಲ್ಲಿ ಗ್ರಾಹಕರು ಆಹಾರದಲ್ಲಿ ಕಲ್ಲುಗಳು, ಕೀಟಗಳನ್ನು ಹಾಕಿದ್ದಾರೆ. ಅಲ್ಲದೆ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ದಿವ್ಯಾ ಅವರು ಆರೋಪಿಸಿದ್ದಾರೆ.

ನಾವು ಬೆದರಿಕೆ ಅಥವಾ ಬ್ಲಾಕ್‌ಮೇಲ್‌ಗೆ ಬಲಿಯಾಗುವುದಿಲ್ಲ. ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಗ್ರಾಹಕರನ್ನು ದಾರಿ ತಪ್ಪಿಸುವ ಮತ್ತು ಸಮಗ್ರತೆಯಿಂದ ಕೆಲಸ ಮಾಡುವ ವ್ಯವಹಾರಗಳ ಖ್ಯಾತಿಗೆ ಹಾನಿ ಮಾಡುವ ಪರಿಶೀಲಿಸದ ವಿಷಯವನ್ನು ಹಂಚಿಕೊಳ್ಳುವುದನ್ನು ತಡೆಯುವಂತೆ ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ದಿವ್ಯಾ ಅವರು ಇದೇ ಸಂದರ್ಭದಲ್ಲಿ ವಿನಂತಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net