ಟೆಸ್ಟ್​ ವಿಶ್ವಕಪ್ ಫೈನಲ್​ನಲ್ಲಿ 4 ವಿಕೆಟ್​ ಕಬಳಿಸಿದರೆ ಅಶ್ವಿನ್​ ಹೊಸ ದಾಖಲೆ!

ash web
Published on

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ 4 ವಿಕೆಟ್​ ಕಬಳಿಸಿದರೆ ಹೊಸ ದಾಖಲೆಯೊಂದನ್ನು ಬರೆಯುವ ಅವಕಾಶ ಭಾರತದ ಸ್ಪಿನ್ನರ್​ ಆರ್​. ಅಶ್ವಿನ್​ ಅವರಿಗೆ ಎದುರಾಗಿದೆ.

ಆಸ್ಟ್ರೆಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​ ಸದ್ಯ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಗರಿಷ್ಠ 70 ವಿಕೆಟ್​ (14 ಪಂದ್ಯ) ಕಬಳಿಸಿದ ದಾಖಲೆ ಹೊಂದಿದ್ದಾರೆ. ಅಶ್ವಿನ್​ ಸದ್ಯ 13 ಪಂದ್ಯಗಳಿಂದ 67 ವಿಕೆಟ್​ ಕಬಳಿಸಿದ್ದು, ಇನ್ನು 4 ವಿಕೆಟ್​ ಕಬಳಿಸಿದರೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಗರಿಷ್ಠ ವಿಕೆಟ್​ ಗಳಿಸಿದ ಬೌಲರ್​ ಎನಿಸಲಿದ್ದಾರೆ.

ನ್ಯೂಜಿಲೆಂಡ್​ ತಂಡದಲ್ಲಿ ಈ ಸಾಧನೆಗೆ ಹತ್ತಿರದಲ್ಲಿರುವವರು ವೇಗಿ ಟಿಮ್​ ಸೌಥಿ. ಆದರೆ ಸೌಥಿ ಸದ್ಯ 10 ಪಂದ್ಯಗಳಿಂದ 51 ವಿಕೆಟ್​ ಗಳಿಸಿದ್ದು, ಕಮ್ಮಿನ್ಸ್​ ದಾಖಲೆ ಹಿಮ್ಮೆಟ್ಟಿಸಬೇಕಾದರೆ ಫೈನಲ್​ ಪಂದ್ಯದ ಎಲ್ಲ 20 ವಿಕೆಟ್​ ಕಬಳಿಸಬೇಕಾದ ಅಸಾಧ್ಯ ಸವಾಲು ಹೊಂದಿದ್ದಾರೆ. ಹೀಗಾಗಿ ಅಶ್ವಿನ್​ ದಾಖಲೆ ಬರೆಯಬಹುದಾದ ನೆಚ್ಚಿನ ಬೌಲರ್​ ಎನಿಸಿದ್ದಾರೆ.

ಆದರೆ ಸೌಥಾಂಪ್ಟನ್​ ಪಿಚ್​ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಸದ್ಯಕ್ಕೆ ಭಾರತ ತಂಡ ಓರ್ವ ಸ್ಪಿನ್​ ಬೌಲರನ್ನು ಮಾತ್ರ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ. ಹೀಗಾಗಿ ಆ ಓರ್ವ ಸ್ಪಿನ್ನರ್​ ಆಗಿ ಅಶ್ವಿನ್​ ಅವರಿಗೇ ಆಡುವ ಅವಕಾಶ ಸಿಕ್ಕರಷ್ಟೇ ದಾಖಲೆ ಸುಲಭವಾಗಲಿದೆ. ತಂಡದಲ್ಲಿ ಸ್ಪಿನ್ನರ್​ ಸ್ಥಾನಕ್ಕೆ ರವೀಂದ್ರ ಜಡೇಜಾ ಮತ್ತು ಅರ್​ ಪಟೇಲ್​ ಕೂಡ ಸ್ಪರ್ಧೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net