ವಿಶ್ವ ನಂ. 1 ಪಟ್ಟದಲ್ಲಿ 10 ವಾರ ಪೂರೈಸಿದ ಚಿರಾಗ್-ಸಾತ್ವಿಕ್​; ಬ್ಯಾಡ್ಮಿಂಟನ್​ನಲ್ಲಿ ಹೊಸ ಇತಿಹಾಸ ಬರೆದ ಭಾರತೀಯ ಜೋಡಿ

web sat chi
Published on

ಹೈದರಾಬಾದ್​: ಭಾರತದ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ವಿಶ್ವ ಬ್ಯಾಡ್ಮಿಂಟನ್​ ರ್ಯಾಂಕಿಂಗ್​ನ ಪುರುಷರ ಡಬಲ್ಸ್​ ವಿಭಾಗದಲ್ಲಿ 10 ವಾರಗಳ ಕಾಲ ವಿಶ್ವ ನಂ. 1 ಪಟ್ಟದಲ್ಲಿ ನೆಲೆಸಿದ್ದಾರೆ. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್​ ರ್ಯಾಂಕಿಂಗ್​ನಲ್ಲಿ ಗರಿಷ್ಠ ವಾರಗಳ ಕಾಲ ಅಗ್ರಸ್ಥಾನ ಅಲಂಕರಿಸಿದ ಭಾರತೀಯರೆನಿಸಿದ್ದಾರೆ. ಮಹಿಳಾ ಸಿಂಗಲ್ಸ್​ ರ್ಯಾಂಕಿಂಗ್​ನಲ್ಲಿ ಸೈನಾ ನೆಹ್ವಾಲ್​ 9 ವಾರಗಳ ಕಾಲ ನಂ. 1 ಪಟ್ಟ ಅಲಂಕರಿಸಿದ್ದು ಈ ಹಿಂದಿನ ದಾಖಲೆಯಾಗಿದೆ.

ಸೈನಾ ನೆಹ್ವಾಲ್​ 2015ರ ಆಗಸ್ಟ್​ 18ರಿಂದ ಅಕ್ಟೋಬರ್​ 21ರವರೆಗೆ ವಿಶ್ವ ನಂ. 1 ಪಟ್ಟದಲ್ಲಿದ್ದರು. ನಂತರದಲ್ಲಿ ಪುರುಷರ ಸಿಂಗಲ್ಸ್​ ರ್ಯಾಂಕಿಂಗ್​ನಲ್ಲಿ ಕಿಡಂಬಿ ಶ್ರೀಕಾಂತ್​ 2018ರಲ್ಲಿ ಕೇವಲ ಒಂದು ವಾರ ಕಾಲ ನಂ. 1 ಪಟ್ಟದಲ್ಲಿ ನೆಲೆಸಿದ್ದರು. ಅದಕ್ಕೆ ಮುನ್ನ 1980ರಲ್ಲಿ ಕನ್ನಡಿಗ ಪ್ರಕಾಶ್​ ಪಡುಕೋಣೆ ಕೂಡ ಕೆಲಕಾಲ ನಂ. 1 ಪಟ್ಟ ಅಲಂಕರಿಸಿದ್ದರು.

ಚಿರಾಗ್​&ಸಾತ್ವಿಕ್​ ಜೋಡಿ ವಿಶ್ವ ನಂ. 1 ಪಟ್ಟದಲ್ಲಿ ಸದ್ಯಕ್ಕೆ 10 ವಾರಗಳನ್ನು ಪೂರೈಸಿದ್ದು, ಇನ್ನೂ ಕೆಲ ವಾರಗಳ ಕಾಲ ಇದನ್ನು ಕಾಯ್ದುಕೊಳ್ಳುವ ನಿರೀೆ ಇದೆ. ಹಾಲಿ ವರ್ಷದ ಮೊದಲ 3 ಪ್ರಮುಖ ಟೂರ್ನಿಗಳಲ್ಲಿ ಅವರಿಬ್ಬರು ಫೈನಲ್​ಗೇರಿದ್ದು, ಈ ಪೈಕಿ ಫ್ರೆಂಚ್​ ಓಪನ್​ ಸೂಪರ್​-750 ಟೂರ್ನಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದರು.

"ಕಳೆದ ಎರಡೂವರೆ ತಿಂಗಳಿನಿಂದ ವಿಶ್ವ ನಂ. 1 ಪಟ್ಟದಲ್ಲಿರುವುದು ವಿಶೇಷ ಅನುಭವ ನೀಡುತ್ತಿದೆ. ಆದರೆ ನಮ್ಮ ಗಮನ ಸಾಧ್ಯವಾದಷ್ಟು ಟೂರ್ನಿಗಳನ್ನು ಗೆಲ್ಲುವುದಾಗಿದೆ. ಆಗ ರ್ಯಾಂಕಿಂಗ್​ ತನ್ನಿಂದ ತಾನೆ ಸುಧಾರಿಸಲ್ಪಡುತ್ತದೆ' ಎಂದು ಚಿರಾಗ್​ ಶೆಟ್ಟಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net