ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಮಾತೃ ಸಮಾನವಾದ ಪ್ರಕೃತಿಯ ಸಂರಕ್ಷಣೆ ನಮ್ಮ ಜೀವಿತಾವಧಿಯ ಶ್ರೇಷ್ಠ ಕಾರ್ಯವಾಗಬೇಕು. ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಮುಂದಿನ ಪೀಳಿಗೆಗೆ, ದೇಶಕ್ಕೆ ಶುದ್ಧ, ಸ್ವಚ್ಛ ಪ್ರಕೃತಿ ನಿರ್ಮಿಸುವುದು ಎಲ್ಲರ ಕರ್ತವ್ಯ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ಎನ್‌ಎಸ್‌ಎಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ರೆಡ್ ಕ್ರಾಸ್ ಯೂನಿಯನ್ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ವಿಮಲ್ ಬಾಬು ಕಾಲೇಜು ಆವರಣದಲ್ಲಿ ಗಿಡ ನೆಟ್ಟು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಗಿಡ ಹಸ್ತಾಂತರಿಸಿದರು. ವಿದ್ಯಾರ್ಥಿಗಳೂ ಗಿಡ ನೆಟ್ಟು ಬಳಿಕ ಸ್ವತಃ ಪೋಷಿಸುವ ಕುರಿತು ಪ್ರತಿಜ್ಞೆ ಕೈಗೊಂಡರು.
ಮುಖ್ಯ ಅತಿಥಿಗಳಾಗಿ ಉಪವಲಯಾರಣ್ಯಾಧಿಕಾರಿ ಮನೋಜ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಎನ್‌ಎಸ್‌ಎಸ್ ಯೋಜನಾಧಿಕಾರಿ ಸೌಮ್ಯಾ ದಿನೇಶ್, ರೋವರ್ಸ್ ಮತ್ತು ರೇಂಜರ್ಸ್ ನಾಯಕಿ ಸವಿತಾ ಕೈಲಾಸ್, ರೆಡ್‌ಕ್ರಾಸ್ ಘಟಕದ ಸಂಯೋಜಕಿ ಪೂರ್ಣಿಮಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.