ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಪರಿಸರ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುವ ಹಾಗೂ ಆತನ ನಡವಳಿಕೆ ಬಿಂಬಿಸುವ ಕೈಗನ್ನಡಿಯಂತೆ ವರ್ತಿಸುತ್ತದೆ. ಎಲ್ಲಿಯವರೆಗೆ ಮನುಷ್ಯನು ಪರಿಸರಕ್ಕೆ ಸ್ನೇಹಿತನಾಗಿರುವನೋ ಅಲ್ಲಿಯವರೆಗೆ ಪರಿಸರವು ಆತನಿಗೆ ಸ್ನೇಹಿತನಾಗಿರುತ್ತದೆ. ಆದ್ದರಿಂದ ನಾವು ಪರಿಸರವನ್ನು ಪ್ರೀತಿಸಬೇಕು, ಕಾಡು ಸಂಪನ್ಮೂಲವಾಗಿ ಬೆಳೆದಾಗ ಮಾತ್ರ ನಮ್ಮ ಭೂಮಿಯು ಸುಂದರವಾಗಲು ಸಾಧ್ಯ ಎಂದು ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಅಭಿಪ್ರಾಯಪಟ್ಟರು.
ಮಜಿ ವೀರಕಂಬದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿ ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಮಾತನಾಡಿ, ಪರಿಸರವು ಎಲ್ಲ ಜೀವಿಗಳಿಗೂ ಆಶ್ರಯ ತಾಣ. ಅದು ಯಾರಿಗೂ ಹಾನಿ ಉಂಟುಮಾಡುವುದಿಲ್ಲ ಎಂದರು.
ಪತ್ರಕರ್ತ ಸಂದೀಪ್ ಸಾಲ್ಯಾನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. 2022-23ನೇ ಸಾಲಿನಲ್ಲಿ ಶಾಲೆಯಲ್ಲಿ ನಡೆದ ಮನೆಗೊಂದು ಗಿಡ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಿಂದ ಶಾಲೆಯ ಪ್ರತಿ ಮಗುವಿಗೆ ನೀಡಿದ ಗಿಡವನ್ನು ಬೆಳೆಸಿಪೋಷಿಸಿದ ವಿದ್ಯಾಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ದಿನಾಚರಣೆ ಕುರಿತು ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಜನಜಾಗೃತಿ ವೇದಿಕೆಯ ಮೇಲ್ವಿಚಾರಕ ನಿತೇಶ್ ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ಯೋಜನೆಯ ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಾ ಶೆಟ್ಟಿ ವಂದಿಸಿದರು, ಶಿಕ್ಷಕಿ ಸಂಗೀತ ಶರ್ಮ ಪಿ.ಜಿ.ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.