ಪುತ್ತೂರು ಗ್ರಾಮಾಂತರ: ಕಳೆದ ಬಾರಿ ಗುದ್ದಲಿ ಪೂಜೆ ನಡೆಸಿರುವ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಕಾಮಗಾರಿಗೆ ಅನುದಾನವೇ ಬಿಡುಗಡೆಯಾಗಿಲ್ಲ ಎಂಬ ಅಪಪ್ರಚಾರ ಕೆಲವು ಕಡೆಗಳಲ್ಲಿ ನಡೆದಿದೆ. ಆದರೆ ಚುನಾವಣಾ ನೀತಿ ಸಂಹಿತೆ ಮತ್ತು ಈ ಬಾರಿಯ ವಿಪರೀತ ಮಳೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಳೆದ ಬಾರಿ ಗುದ್ದಲಿ ಪೂಜೆ ನಡೆಸಲಾದ ಎಲ್ಲ ಕಾಮಗಾರಿಗಳೂ ಈ ಬಾರಿ ನಡೆಯಲಿದ್ದು, ಜನರಿಗೆ ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಬೆಟ್ಟಂಪಾಡಿ ಗ್ರಾಮದ ಇರ್ದೆಯಲ್ಲಿ ಶನಿವಾರ 41.5 ಲಕ್ಷ ರೂ. ಅನುದಾನದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ 40 ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದ ಚೆಲ್ಯಡ್ಕ ಸೇತುವೆಗೆ ಮುಕ್ತಿ ನೀಡಿದ್ದೇನೆ. ಶಾಸಕನಾದ 6 ತಿಂಗಳಲ್ಲೇ ಸೇತುವೆ ಕಾಮಗಾರಿಗಾಗಿ 3 ಕೋಟಿ ರೂ.ಅನುದಾನ ತಂದಿದ್ದೇನೆ, ಕಾಮಗಾರಿ ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಇನ್ನು ಕೆಲವೇ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ. ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಜನತೆ ಅಭಿವೃದ್ಧಿ ಪರ ಮತ ಚಲಾಯಿಸುವ ಪೃವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿದರು. ಕೆ.ಪಿ ಭಟ್, ಗ್ರಾಪಂ ಸದಸ್ಯರಾದ ಮೊಯ್ದು, ಸುಮಲತಾ, ಮಹಾಲಿಂಗ ನಾಯ್ಕ, ಪ್ರಮುಖರಾದ ಸದಾಶಿವ ರೈ ಚೆಲ್ಯಡ್ಕ, ಪುತ್ತು ಚೆಲ್ಯಡ್ಕ, ರೋಶನ್ ರೈ ಬನ್ನೂರು, ಗುತ್ತಿಗೆದಾರ ರಾಕೇಶ್ ರೈ ಕುದ್ಕಾಡಿ, ಅಬೂಬಕ್ಕರ್ ಕೊರಿಂಗಿಲ, ಮಾಧವ ಪೂಜಾರಿ ರೆಂಜ, ದಯನಾಂದ ರೈ ಕೊರ್ಮಂಡ, ದಾಮೋದರ ಪಾಟಾಳಿ ಉಪ್ಪಳಿಗೆ ಮತ್ತಿತರರು ಇದ್ದರು.