ಬಂಟ್ವಾಳ: ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದೊಂದಿಗೆ ದೇಶದ ಶ್ರೇಷ್ಠತೆ, ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಬೇಕು. ದೇಶವನ್ನು ಶ್ರೇಷ್ಠ ಮಟ್ಟಕ್ಕೇರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೇವಲ ಅಂಕ-ಶ್ರೇಯಾಂಕಗಳು ಮಾತ್ರವಲ್ಲದೆ, ಮನುಷ್ಯನಾಗಿ ಬಾಳಲು ಬೇಕಿರುವ ಸಂಸ್ಕಾರಯುತ ಶಿಕ್ಷಣ ಕೊಡುವ ಪ್ರಯತ್ನ ನಡೆಯಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್‌ಕಾಲೇಜು ಮಟ್ಟದ ಉತ್ಕರ್ಷ ಫೆಸ್ಟ್ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಗತಿಪರ ಕೃಷಿಕ ಶಿವಪ್ಪ ಪೂಜಾರಿ, ನಿವೃತ್ತ ಪೊಲೀಸ್ ಅಧಿಕಾರಿ ರಾಮಪ್ರಸಾದ್, ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಧೀರಜ್ ಬಲ್ಲೆಕೋಡಿ ಹಾಗೂ ಸುಜಿತ್ ಕೊಟ್ಟಾರಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಉಪಪ್ರಾಂಶುಪಾಲ ಯತಿರಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ದಿವ್ಯಲಕ್ಷ್ಮೀ ಸ್ವಾಗತಿಸಿ, ಜಯಸೂರ್ಯ ವಂದಿಸಿದರು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು.
ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಬಂಟ್ವಾಳ- ಪುತ್ತೂರು ತಾಲೂಕುಗಳ 9 ಪದವಿಪೂರ್ವ ಕಾಲೇಜುಗಳ 486 ವಿದ್ಯಾರ್ಥಿಗಳು ಜಾನಪದ ನೃತ್ಯ, ಬಲೆ ತೆಲಿಪಾಲೆ, ರಸಪ್ರಶ್ನೆ, ಕಸದಿಂದ ರಸ, ಮೆಹಂದಿ ಇತ್ಯಾದಿ ಒಳಾಂಗಣ ಸ್ಪರ್ಧೆಗಳು ಹಾಗೂ ವಾಲಿಬಾಲ್, ಹಗ್ಗ ಜಗ್ಗಾಟ ಮುಂತಾದ ಹೊರಾಂಗಣ ಸ್ಪರ್ಧೆಗಳು ಸೇರಿದಂತೆ ಒಟ್ಟು 14 ಸ್ಪರ್ಧೆಗಳಲ್ಲಿ ಭಾಗವಹಿಸಿದರು.