ಮಹಿಳೆಯರ ತ್ರಿಕೋನ ಏಕದಿನ ಸರಣಿ: ಫೈನಲ್​​ಗೇರಿದ ಭಾರತ ತಂಡ

web wom jem
Published on

ಕೊಲಂಬೊ: ಜೆಮೀಮಾ ರೋಡ್ರಿಗಸ್​ (123 ರನ್​, 101 ಎಸೆತ, 15 ಬೌಂಡರಿ, 1 ಸಿಕ್ಸರ್​) ಭರ್ಜರಿ ಶತಕದಾಟದ ಬಲದಿಂದ ಭಾರತ ತಂಡ ಮಹಿಳೆಯರ ತ್ರಿಕೋನ ಏಕದಿನ ಸರಣಿಯ ತನ್ನ 4ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 23 ರನ್​ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ಮಾತ್ರವಲ್ಲದೆ ಆತಿಥೇಯ ಶ್ರೀಲಂಕಾ ತಂಡವೂ ಫೈನಲ್​ ಪ್ರವೇಶಿಸಿದ್ದರೆ, ಹ್ಯಾಟ್ರಿಕ್​ ಸೋಲು ಕಂಡ ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿದೆ.

ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ 50 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ ಜೆಮೀಮಾ ಜತೆಗೆ ಸ್ಮೃತಿ ಮಂದನಾ (51) ಮತ್ತು ದೀಪ್ತಿ ಶರ್ಮ (93) ಪ್ರದರ್ಶಿಸಿದ ದಿಟ್ಟ ಬ್ಯಾಟಿಂಗ್​ನಿಂದ ಭಾರತ 9 ವಿಕೆಟ್​ಗೆ 337 ರನ್​ ಕಲೆಹಾಕಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಆನ್ನೆರಿ ಡೆರ್ಕ್​ಸೆನ್​ (81) ಮತ್ತು ನಾಯಕಿ ಕ್ಲೋಯಿ ಟೆಯಾನ್​ (67) ಪ್ರತಿರೋಧದ ನಡುವೆಯೂ 7 ವಿಕೆಟ್​ಗೆ 314 ರನ್​ ಗಳಿಸಲಷ್ಟೇ ಶಕ್ತವಾಯಿತು. ಅಮನ್​ಜೋತ್​ ಕೌರ್​ (59ಕ್ಕೆ 3) ಮತ್ತು ದೀಪ್ತಿ ಶರ್ಮ (57ಕ್ಕೆ 2) ಬೌಲಿಂಗ್​ನಲ್ಲಿ ಮಿಂಚಿದರು.

ಟೂರ್ನಿಯ ಅಂತಿಮ ಲೀಗ್​ ಪಂದ್ಯ ಶುಕ್ರವಾರ ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವೆ ನಡೆಯಲಿದ್ದು, ಇದು ಕೇವಲ ಔಪಚಾರಿಕ ಕಾದಾಟವೆನಿಸಿದೆ. ಲಂಕಾ ಮೊದಲ 3 ಪಂದ್ಯಗಳಲ್ಲಿ 2 ಜಯ ಸಾಧಿಸಿದೆ. ಭಾನುವಾರ ಫೈನಲ್​ನಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿ ಆಗಲಿವೆ.

ಭಾರತ: 9 ವಿಕೆಟ್​ಗೆ 337 (ಪ್ರತಿಕಾ 1, ಸ್ಮೃತಿ 51, ಹರ್ಲೀನ್​ 4, ಹರ್ಮಾನ್​ಪ್ರೀತ್​ 28, ಜೆಮೀಮಾ 123, ದೀಪ್ತಿ 93, ರಿಚಾ 20, ಕ್ಲಾಸ್​ 51ಕ್ಕೆ 2, ಡಿ ಕ್ಲರ್ಕ್​ 54ಕ್ಕೆ 2, ನೊಂಕುಲುಲೆಕೊ 71ಕ್ಕೆ 2). ದಕ್ಷಿಣ ಆಫ್ರಿಕಾ: 7 ವಿಕೆಟ್​ಗೆ 314 (ಬ್ರಿಟ್ಸ್​ 26, ಸ್ಮಿಟ್​ 39, ಡೆರ್ಕ್​ಸೆನ್​ 81, ಶಂಗಸೆ 36, ಜ್ತಾ 21, ಟೆಯಾನ್​ 67, ಡಿ ಕ್ಲರ್ಕ್​ 22*, ಅಮನ್​ಜೋತ್​ 59ಕ್ಕೆ 3, ದೀಪ್ತಿ 57ಕ್ಕೆ 2, ಪ್ರತಿಕಾ 15ಕ್ಕೆ 1).

ಫೈನಲ್​

ಭಾರತ-ಶ್ರೀಲಂಕಾ

ಯಾವಾಗ: ಮೇ 11

ಆರಂಭ: ಬೆಳಗ್ಗೆ 10.00

*89: ಜೆಮೀಮಾ ರೋಡ್ರಿಗಸ್​ (89 ಎಸೆತ) ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಭಾರತದ 3ನೇ ಅತಿವೇಗದ ಶತಕ ಸಾಧಕಿ ಎನಿಸಿದರು. ಸ್ಮೃತಿ ಮಂದನಾ (70), ಹರ್ಮಾನ್​ಪ್ರೀತ್​ ಕೌರ್​ (87) ಮೊದಲ 2 ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net