ಐಸಿಸಿ ರ‍್ಯಾಂಕಿಂಗ್ ವಾರ್ಷಿಕ ಪರಿಷ್ಕರಣೆ: ವೈಟ್​ಬಾಲ್​ನಲ್ಲಿ ಭಾರತದ ಅಗ್ರಸ್ಥಾನ ಭದ್ರ; ಟೆಸ್ಟ್​ನಲ್ಲಿ ಕುಸಿತ...

web champs
Published on

ದುಬೈ: ಐಸಿಸಿ ಪುರುಷರ ರ‍್ಯಾಂಕಿಂಗ್ ಪಟ್ಟಿ ಸೋಮವಾರ ವಾರ್ಷಿಕ ಪರಿಷ್ಕರಣೆ ಕಂಡಿದ್ದು, ಭಾರತ ತಂಡ ಏಕದಿನ ಮತ್ತು ಟಿ20ಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದರೆ, ಟೆಸ್ಟ್​ನಲ್ಲಿ 3ರಿಂದ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಪರಿಷ್ಕೃತ ರ‍್ಯಾಂಕಿಂಗ್  ಅನ್ವಯ 2024ರ ಮೇ ನಂತರದ ಎಲ್ಲ ಪಂದ್ಯಗಳಿಗೆ ಶೇ. 100 ಮತ್ತು ಅದಕ್ಕೆ ಹಿಂದಿನ 2 ವರ್ಷಗಳ ಪಂದ್ಯಗಳಿಗೆ ಶೇ. 50 ಅಂಕ ನೀಡಲಾಗಿದೆ.

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಚಾಂಪಿಯನ್​ ಭಾರತ ತಂಡ ಏಕದಿನ ರ‍್ಯಾಂಕಿಂಗ್​ನಲ್ಲಿ 124 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ಗಿಂತ (109) 15 ಅಂಕಗಳ ಮುನ್ನಡೆಯಲ್ಲಿದೆ. ಏಕದಿನ ವಿಶ್ವಕಪ್​ ಚಾಂಪಿಯನ್​ ಆಸ್ಟ್ರೆಲಿಯಾ (109) ದಶಾಂಕ ಲೆಕ್ಕಾಚಾರದಲ್ಲಿ ಹಿನ್ನಡೆ ಕಂಡು 3ನೇ ಸ್ಥಾನದಲ್ಲಿದೆ.

ಚುಟುಕು ಕ್ರಿಕೆಟ್​ ವಿಶ್ವಕಪ್​ ಚಾಂಪಿಯನ್​ ಭಾರತ ಟಿ20 ರ‍್ಯಾಂಕಿಂಗ್​ನಲ್ಲಿ 271 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಆಸೀಸ್​ (262) ದ್ವೀತಿಯ ಸ್ಥಾನದಲ್ಲಿದೆ.

ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಆಸೀಸ್​ 126 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಇಂಗ್ಲೆಂಡ್​ (113) 4ರಿಂದ 2ನೇ ಸ್ಥಾನಕ್ಕೆ ಜಿಗಿದಿದೆ. ಇದರಿಂದ ದಕ್ಷಿಣ ಆಫ್ರಿಕಾ (111) 2ರಿಂದ 3ನೇ ಸ್ಥಾನಕ್ಕಿಳಿದಿದ್ದರೆ, ಭಾರತ 105 ಅಂಕಗಳೊಂದಿಗೆ 1 ಸ್ಥಾನ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net