ಮಹಿಳಾ ಟಿ20 ವಿಶ್ವಕಪ್: ಸೋಲಿನ ನಡುವೆ ಭಾರತವನ್ನು ಕಾಡಿದ ರನೌಟ್​-ಡೆಡ್​ಬಾಲ್ ವಿವಾದ!​

web contravercy
Published on

ದುಬೈ: ಪುರುಷರ ಟಿ20 ವಿಶ್ವಕಪ್​ ಗೆಲುವಿನ ಸಾಧನೆ ಪುನರಾವರ್ತಿಸುವ ಹಂಬಲದಲ್ಲಿ ಕಣಕ್ಕಿಳಿದ ಭಾರತದ ಮಹಿಳೆಯರ ತಂಡ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್​ ಎದುರು ಎಡವಿದೆ. ಇದರಿಂದ ಭಾರತದ ಸೆಮೀಸ್​ ಹಾದಿ ಕಠಿಣಗೊಂಡಿದೆ. ಈ ಸೋಲಿನ ನಡುವೆ ಪಂದ್ಯದಲ್ಲಿ ರನೌಟ್​-ಡೆಡ್​ಬಾಲ್​ ವಿವಾದವೂ ಭಾರತವನ್ನು ಕಾಡಿತು.

ದೀಪ್ತಿ ಶರ್ಮ ಎಸೆದ ಪಂದ್ಯದ 14ನೇ ಓವರ್​ನ ಕೊನೇ ಎಸೆತದಲ್ಲಿ ಅಮೆಲಿಯಾ ಕೆರ್​ 2ನೇ ರನ್​ ಕಸಿಯಲು ಯತ್ನಿಸಿದಾಗ ಕೀಪರ್​ ರಿಚಾ ಘೋಷ್​, ಅವರನ್ನು ರನೌಟ್​ ಮಾಡಿದರು. ಆದರೆ ಅಂಪೈರ್​, ಡೆಡ್​ಬಾಲ್​ ಎಂದು ಪರಿಗಣಿಸಿ ರನೌಟ್​ ತೀರ್ಪು ನೀಡಲು ನಿರಾಕರಿಸಿದರು. ಕೆರ್​-ಡಿವೈನ್​ ಮೊದಲ ರನ್​ ಗಳಿಸಿದ ಬೆನ್ನಲ್ಲೇ ಅಂಪೈರ್​, ಬೌಲರ್​ ದೀಪ್ತಿಗೆ ಕ್ಯಾಪ್​ ಮರಳಿಸಿದರು. ಈ ನಡುವೆ ಕಿವೀಸ್​ ಜೋಡಿ 2ನೇ ರನ್​ ಕಸಿಯಲು ಯತ್ನಿಸಿದಾಗ ಭಾರತ ರನೌಟ್​ ಮಾಡಿದರೂ, ಅಂಪೈರ್​ ಔಟ್​ ನೀಡಲಿಲ್ಲ. ಇದರಿಂದ ಅಂಪೈರ್​ ಮತ್ತು ನಾಯಕಿ ಹರ್ಮಾನ್​ಪ್ರೀತ್​ ಕೌರ್​ ನಡುವೆ ಕೆಲಕಾಲ ವಾಗ್ವಾದ ಏರ್ಪಟ್ಟಿತು.

ಈ ವಿವಾದ ಭಾರತದ ಆಟಗಾರ್ತಿಯರನ್ನು ಮಾನಸಿಕವಾಗಿಯೂ ಕುಗ್ಗಿಸಿತು. ಇದು ಕೂಡ ಬಳಿಕ ಅವರ ನಿರ್ವಹಣೆಯ ಮೇಲೆ ಪರಿಣಾಮ ಬೀರಿತು. ಈ ವಿವಾದದಿಂದಾಗಿ ಹರ್ಮಾನ್​ಪ್ರೀತ್​ ಕೌರ್​ ಇನ್ನು ಐಸಿಸಿಯಿಂದ ದಂಡ ಅಥವಾ ನಿಷೇಧ ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಕಾಣಿಸಿದೆ. ಅಂಪೈರ್​ ಜತೆಗೆ ವಾಗ್ವಾದ ನಡೆಸುವ ಮೂಲಕ ಅವರು ಐಸಿಸಿ ನೀತಿಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net