

ದುಬೈ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರಲು ವಿಲವಾದ ಭಾರತ ತಂಡ 9ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ನಾಯಕಿ ಸೋಫಿ ಡಿವೈನ್ (57*ರನ್, 36 ಎಸೆತ, 7 ಬೌಂಡರಿ) ದಿಟ್ಟ ಬ್ಯಾಟಿಂಗ್ ಹಾಗೂ ಸಂಟಿತ ಬೌಲಿಂಗ್ ದಾಳಿ ಎದುರು ಮಂಕಾದ ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ನ್ಯೂಜಿಲೆಂಡ್ ಎದುರು 58 ರನ್ಗಳಿಂದ ಆಘಾತಕಾರಿ ಸೋಲು ಅನುಭವಿಸಿತು. ಇದರಿಂದ ಭಾರತದ ಸೆಮೀಸ್ ಹಾದಿ ಜಟಿಲಗೊಂಡಿದೆ.
ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, 4 ವಿಕೆಟ್ಗೆ 160 ರನ್ ಕಲೆಹಾಕಿತು. ಕಿವೀಸ್ ಕೊನೇ 5 ಓವರ್ಗಳಲ್ಲಿ 51 ರನ್ ಕಸಿಯಿತು. ಪ್ರತಿಯಾಗಿ ಪವರ್ಪ್ಲೇನಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಪರದಾಡಿದ ಭಾರತ ನಂತರ ಗೆಲುವಿನ ಹಾದಿಗೆ ಮರಳಲೇ ಇಲ್ಲ. ಅಂತಿಮವಾಗಿ 19 ಓವರ್ಗಳಲ್ಲಿ 102 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತಕ್ಕೆ ಕೈಕೊಟ್ಟ ಬ್ಯಾಟಿಂಗ್
ಪ್ರತಿ ಓವರ್ಗೆ 8ಕ್ಕಿಂತ ಹೆಚ್ಚಿನ ರನ್ ಪೇರಿಸಬೇಕಾದ ಸವಾಲಿಗೆ ಪ್ರತಿಯಾಗಿ ಭಾರತೀಯ ಬ್ಯಾಟಿಂಗ್ ದಯನೀಯ ವೈಲ್ಯ ಕಂಡಿತು. ಸ್ಮೃತಿ ಮಂದನಾ (12), ಶೆಫಾಲಿ ವರ್ಮ (2) ಮತ್ತು ನಾಯಕಿ ಹರ್ಮಾನ್ಪ್ರೀತ್ ಕೌರ್ (15) ಪವರ್ಪ್ಲೇನಲ್ಲೇ ಡಗೌಟ್ಗೆ ಮರಳಿದರೆ, ನಂತರದಲ್ಲಿ ಜೆಮೀಮಾ ರೋಡ್ರಿಗಸ್ (13), ರಿಚಾ ಘೋಷ್ (12), ದೀಪ್ತಿ ಶರ್ಮ (13) ತಂಡವನ್ನು ಗೆಲುವಿನ ಹಾದಿಗೆ ತರಲು ವಿಫಲರಾದರು. 11 ಓವರ್ಗಳಲ್ಲಿ 70 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಾಗಲೇ ಭಾರತದ ಸೋಲು ಬಹುತೇಕ ಖಚಿತವೆನಿಸಿತು.
ಕಿವೀಸ್ ದಿಟ್ಟ ಆರಂಭ
ಸುಜಿ ಬೇಟ್ಸ್ (27) ಮತ್ತು ಜಾರ್ಜಿಯಾ ಪ್ಲಿಮ್ಮರ್ (34) ಮೊದಲ ವಿಕೆಟ್ಗೆ 46 ಎಸೆತಗಳಲ್ಲಿ 67 ರನ್ ಕಸಿದು ಭಾರತಕ್ಕೆ ತಲೆನೋವಾದರು. ಬೇಟ್ಸ್ 18 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ರಿಚಾ ಘೋಷ್ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ಪವರ್ಪ್ಲೇನಲ್ಲಿ ಈ ಜೋಡಿ 55 ರನ್ ಕಸಿಯಿತು. ನಂತರ ಪಂದ್ಯದ 8ನೇ ಓವರ್ನಲ್ಲಿ ಬೇಟ್ಸ್ರನ್ನು ಔಟ್ ಮಾಡಿದ ಅರುಂಧತಿ ರೆಡ್ಡಿ ಈ ಜೋಡಿಯನ್ನು ಬೇರ್ಪಡಿಸಿದರು. ಮರುಓವರ್ನಲ್ಲೇ ಆಶಾ ಶೋಭನಾ ಮತ್ತೋರ್ವ ಆರಂಭಿಕ ಆಟಗಾರ್ತಿ ಪ್ಲಿಮ್ಮರ್ ವಿಕೆಟ್ ಕಬಳಿಸಿದರು. ಆಗ ಕಣಕ್ಕಿಳಿದ ಸೋಫಿ ಡಿವೈನ್ ನಂತರ ಕಿವೀಸ್ಗೆ ಆಸರೆಯಾಗಿ ನಿಂತರು.
ಡಿವೈನ್ ಬಿರುಸಿನಾಟ
ಸೋಫಿ ಡಿವೈನ್ 9ನೇ ಓವರ್ನಲ್ಲಿ ಕ್ರೀಸ್ಗೆ ಇಳಿದು ಇನಿಂಗ್ಸ್ನ ಕೊನೆಯವರೆಗೂ ಕಿವೀಸ್ಗೆ ಆಧಾರವಾದರು. ಅವರಿಗೆ ಅಮೆಲಿಯಾ ಕೆರ್ (13) ಮತ್ತು ಬ್ರೂಕ್ ಹಾಲಿಡೇ (16) ಉತ್ತಮ ಬೆಂಬಲ ಒದಗಿಸಿದರು. 3ನೇ ವಿಕೆಟ್ಗೆ ಕೆರ್ ಜತೆ 32 ಮತ್ತು 4ನೇ ವಿಕೆಟ್ಗೆ ಹಾಲಿಡೇ ಜತೆ 46 ರನ್ ಪೇರಿಸಿದರು. ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸವಾಲಾದ ಡಿವೈನ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 35 ವರ್ಷದ ಡಿವೈನ್ ಟಿ20 ಕ್ರಿಕೆಟ್ನಲ್ಲಿ ಸಿಡಿಸಿದ 21ನೇ ಅರ್ಧಶತಕ ಇದಾಗಿದೆ. ದೀಪ್ತಿ ಶರ್ಮ ಎಸೆದ ಪಂದ್ಯದ 18ನೇ ಓವರ್ನಲ್ಲಿ ಡಿವೈನ್-ಹಾಲಿಡೇ ಜೋಡಿ 3 ಬೌಂಡರಿ ಸಹಿತ 16 ರನ್ ಕಸಿಯುವ ಮೂಲಕ ಕಿವೀಸ್ ತಂಡವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು.
ನ್ಯೂಜಿಲೆಂಡ್: 4 ವಿಕೆಟ್ಗೆ 160 (ಬೇಟ್ಸ್ 27, ಪ್ಲಿಮ್ಮರ್ 34, ಕೆರ್ 13, ಡಿವೈನ್ 57*, ಹಾಲಿಡೇ 16, ರೇಣುಕಾ ಸಿಂಗ್ 27ಕ್ಕೆ 2, ಅರುಂಧತಿ 28ಕ್ಕೆ 1, ಆಶಾ ಶೋಭನಾ 22ಕ್ಕೆ 1). ಭಾರತ: 19 ಓವರ್ಗಳಲ್ಲಿ 102 (ಸ್ಮೃತಿ 12, ಶೆಫಾಲಿ 2, ಹರ್ಮಾನ್ಪ್ರೀತ್ 15, ಜೆಮೀಮಾ 13, ರಿಚಾ 12, ದೀಪ್ತಿ 13, ಕರ್ಸನ್ 34ಕ್ಕೆ 2, ರೋಸ್ಮೇರಿ ಮೈರ್ 19ಕ್ಕೆ 4, ತಹುಹು 15ಕ್ಕೆ 3).
ಇನ್ನು ಮಾಡು ಇಲ್ಲವೆ ಮಡಿ ಸವಾಲು
ಭಾರತದ ಮಹಿಳೆಯರು ಮೊದಲ ಪಂದ್ಯದಲ್ಲೇ ಸೋತಿರುವುದರಿಂದ, ಸೆಮಿಫೈನಲ್ಗೇರಲು ಇನ್ನು ಉಳಿದ 3 ಲೀಗ್ ಪಂದ್ಯಗಳಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ನಡೆಸಬೇಕಾಗಿದೆ. ಪಾಕಿಸ್ತಾನ (ಅ.6), ಶ್ರೀಲಂಕಾ (ಅ.9) ಜತೆಗೆ ಭಾರತ ಇನ್ನು ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ (ಅ.13) ವಿರುದ್ಧದ ಕೊನೇ ಪಂದ್ಯದಲ್ಲೂ ಗೆಲ್ಲಬೇಕಾಗಿದೆ. ಕಿವೀಸ್ ವಿರುದ್ಧದ ಬೃಹತ್ ಸೋಲಿನಿಂದ ಭಾರತದ ರನ್ರೇಟ್ಗೂ (-1.550) ಭಾರಿ ಹೊಡೆತ ಬಿದ್ದಿದೆ.