ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತಾ ಸಮೀಕ್ಷೆ; ಬಿ.ಪ್ಯಾಕ್ - ಸಿಜಿಐ ಸಹಭಾಗಿತ್ವದಲ್ಲಿ ಬಿ.ಸೇಫ್ ಸರ್ವೇ

safe
Published on

ಬೆಂಗಳೂರು: ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಸುರಕ್ಷತೆ ಕುರಿತು ಬಿ.ಪ್ಯಾಕ್ ಮತ್ತು ಸಿಜಿಐ ಸಂಸ್ಥೆ ನಡೆಸಿದ ಬಿ.ಸೇಫ್ ಸಮೀಕ್ಷಾ ವರದಿಯನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ನಟಿ ಆಶಾಭಟ್, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಹಾಗೂ ಸಿಜಿಐ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ನಟಿ ಆಶಾಭಟ್, ಇಂದು ಮಹಿಳಾ ಸಬಲೀಕರಣಕ್ಕೆ ಆದ್ಯತೆ ಹೆಚ್ಚಾಗಿದ್ದು, ಮಹಿಳಾ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಿಪ್ಯಾಕ್ ನಡೆಸಿದ ಸಮೀಕ್ಷೆ ಆಡಳಿತ ನಡೆಸುವ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನವಾಗಲಿದೆ. ಸಮೀಕ್ಷೆಯಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಸರಿಪಡಿಸಬೇಕು ಎಂದರು. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಮಾತನಾಡಿ, ಸರ್ಕಾರದ ಕೆಲಸವನ್ನು ಸರಳಗೊಳಿಸುವ ಬಿ.ಪ್ಯಾಕ್ ನಂತಹ ಹೆಚ್ಚಿನ ಸಂಸ್ಥೆಗಳ ಕಾರ್ಯ ಸಮಾಜಕ್ಕೆ ಅಗತ್ಯವಿದೆ. ಸಮೀಕ್ಷೆಯಲ್ಲಿ ಬೆಳಕು ಚೆಲ್ಲಿರುವ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿ ಹಾಗೂ ಸುರಕ್ಷಿತ ನಗರವನ್ನು ರೂಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಸಿಎಸ್‌ಆರ್ ಮತ್ತು ಇಎಸ್‌ಜಿ ಮುಖ್ಯಸ್ಥ ಸುಧಾಕರ್ ಪೈ, ಬಿ.ಪ್ಯಾಕ್ ಮುಖ್ಯಸ್ಥೆ ರೇವತಿ ಅಶೋಕ್, ಆಶಾಭಟ್, ಜ್ಯೋತಿ ಗೋಯೆಂಕಾ ಮತ್ತಿತರರು ಉಪಸ್ಥಿತರಿದ್ದರು.

ಸಮೀಕ್ಷಾ ವರದಿಯ ಪ್ರಮುಖಾಂಶಗಳು:

ಈಗಾಗಲೇ ಬೆಂಗಳೂರಿನ 6 ವಿಧಾನಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿರುವ ಬಿ.ಪ್ಯಾಕ್ ಸಂಸ್ಥೆಗೆ ಸಿಜಿಐ ಮತ್ತಿತರ ಸಂಸ್ಥೆಗಳೂ ಸಹಕಾರ ನೀಡಿವೆ. 2024-25ನೇ ಸಾಲಿನಲ್ಲಿ ವಿಜಯನಗರ ಹಾಗು ಗೋವಿಂದರಾಜನಗರ ಕ್ಷೇತ್ತಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 19 ವಾರ್ಡ್‌ಗಳು ಸೇರಿವೆ. ಮಹಿಳೆಯರು ಹೆಚ್ಚಾಗಿ ಭೇಟಿ ನೀಡುವ ಅಂಗನವಾಡಿ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಪೊಲೀಸ್ ಠಾಣೆ, ಆಸ್ಪತ್ರೆ ಸೇರಿ 265 ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯನ್ನು ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದ್ದಾರೆ. * ಬಸ್ ನಿಲ್ದಾಣಗಳಲ್ಲಿನ ಮೂಲಭೂತ ಸೌಕರ್ಯವನ್ನು ಅಭವೃದ್ಧಿಪಡಿಸಬೇಕು. * ಬಸ್ ನಿಲ್ದಾಣದ ಸುತ್ತಮುತ್ತಲ ಪಾದಚಾರಿ ಮಾರ್ಗಗಳ ಸುಧಾರಣೆ ಅಗತ್ಯ.* ಅಂಗನವಾಡಿ ಕೇಂದ್ರಗಳನ್ನು ಆರೈಕೆ ಕೇಂದ್ರಗಳಾಗಿ ವಿಸ್ತರಿಸಬೇಕು. * ಉದ್ಯಾನವನಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಅಳವಡಿಸಬೇಕು. * ಸಾರ್ವಜನಿಕ ಶೌಚಾಲಯಗಳ ಸ್ವಚ್ಛ ತೆ, ಸ್ಯಾನಿಟರಿ ಪ್ಯಾಡ್ ಇಡುವುದು ಹಾಗೂ ಪ್ಯಾಡ್ ಬದಲಾವಣೆಗೆ ಸೂಕ್ತ ಸ್ಥಳ ವಿನ್ಯಾಸಗೊಳಿಸಬೇಕು. ಸಮೀಕ್ಷೆಯ ಹೆಚ್ಚಿನ ಮಾಹಿತಿಗಾಗಿ : https://bpac.in/b-safe-constituency/ ಈ ಲಿಂಕ್‌ಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net