

ಬೆಂಗಳೂರು: ಅಳಿವಿನಂಚಿನಲ್ಲಿರುವ ಅನೇಕ ಸಮುದಾಯ, ಸಂಸ್ಕೃತಿ, ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ದಾಖಲೀಕರಣ ಮಾಡುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಎಂಬ ಮಾತನ್ನು ಎಲ್ಲೆಡೆ ಬಳಸುತ್ತೇವೆ. ಸಾಂಸ್ಕೃತಿಕ ಬಹುಸಂಸ್ಕೃತಿಯನ್ನು ಭಾರತೀಯ ಭಾವ ಬಂಧುತ್ವದ ಏಕತೆಯಲ್ಲಿ ನಿರೂಪಿಸುವುದು ನಮ್ಮ ಗುರಿಯಾಗಬೇಕು. ಸಂಶೋಧನೆಯೊಂದರೆ ಪ್ರಕಾರ ಜಗತ್ತಿನಲ್ಲಿ 6703 ಭಾಷೆಗಳಿವೆ. 30 ಸಾವಿರ ಭಾಷೆ ನಶಿಸಿ ಹೋಗಿವೆ. 10 ಭಾಷೆಗಳನ್ನು ಜಗತ್ತಿನ ಅರ್ಧದಷ್ಟು ಜನ ಬಳಸುತ್ತಾರೆ. ಅಳಿವಿನಂಚಿನಲ್ಲಿರುವ, ಸೀಮಿತ ಜನ ಸಮುದಾಯ ಬಳಸುವ ಸಾವಿರಾರು ಭಾಷೆಗಳಿವೆ. ಅಂತಹ ಭಾಷೆಯ ರಕ್ಷಣೆಯಿಂದ ಆ ಸಮುದಾಯ, ಸಂಸ್ಕೃತಿ, ಜನಜೀವನವನ್ನು ರಕ್ಷಿಸಿದಂತಾಗುತ್ತದೆ. ಆದ್ದರಿಂದ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹುಡುಕಿ ಅದನ್ನು ದಾಖಲೀಕರಣ ಮಾಡುವುದರಿಂದ ಅಳಿವಿನಂಚಿನಲ್ಲಿರುವ, ಅಲಕ್ಷಿತ ಸಂಸ್ಕೃತಿಯ ಬಗ್ಗೆ ಜಗತ್ತಿಗೆ ಪರಿಚಯವಾಗುತ್ತದೆ. ಈ ನಿಟ್ಟಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕೈಗೆತ್ತಿಕೊಂಡಿರುವ ಬಂಜಾರ ಸಂಸ್ಕೃತಿ ವಿಶ್ವಕೋಶ ರಚನೆ ಕಾರ್ಯ ಸ್ವಾಗತಾರ್ಹವಾಗಿದ್ದು, ಸರ್ಕಾರ ಈ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಬೇಕು.
ದೇಶದಲ್ಲೇ ಅತಿಹೆಚ್ಚು ಅಕಾಡೆಮಿಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರ ಸಂಸ್ಕೃತಿಯನ್ನು ವಿಕೇಂದ್ರೀಕರಣಗೊಳಿಸಿ, ಬಹುತ್ವದ ಬದ್ಧತೆಯನ್ನು ದೇಶಕ್ಕೆ ಪರಿಚಯಿಸಿದೆ ಎಂದು ಬರಗೂರು ವಿವರಿಸಿದರು.
ಸಮಾರಂಭದಲ್ಲಿ 2024ನೇ ಸಾಲಿನ ‘ಶ್ರೀ ಸಂತ ಸೇವಾಲಾಲ್’ ಪ್ರಶಸ್ತಿಯನ್ನು ಮಾಜಿ ಸಚಿವೆ ಹಾಗೂ ಲೇಖಕಿ ಡಾ.ಬಿ.ಟಿ.ಲಲಿತಾನಾಯಕ್ರಿಗೆ ನೀಡಿ ಗೌರವಿಸಲಾಯಿತು. 2023 ಮತ್ತು 2024ನೇ ಸಾಲಿನ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗಳನ್ನು 40 ಸಾಧಕರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಮುಕುಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಗಾಯತ್ರಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ರಿಜಿಸ್ಟ್ರಾರ್ ಡಿ.ಎಂ.ರವಿಕುಮಾರ್, ಅಕಾಡೆಮಿ ಸದಸ್ಯರುಗಳು ಪಾಲ್ಗೊಂಡಿದ್ದರು.
"ಕಲಿತಿರುವ ವಿದ್ಯೆ ಮೌಡ್ಯಕ್ಕೆ ಕಾರಣವಾಗಬಾರದು. ಬಂಜಾರ ಸಮಾಜದಲ್ಲಿ ವಿದ್ಯೆ ಕಲಿತಿರುವ ಹಲವರು ಸಮುದಾಯದ ಒಳಿತಿಗಾಗಿ ಕೆಲಸ ಮಾಡುತ್ತಿಲ್ಲ. ನನಗೆ ಸಮಾಜ, ಸರ್ಕಾರ ಬಹಳಷ್ಟು ಗೌರವ ನೀಡಿದೆ. ಸೇವಾಲಾಲ್ ಹೆಸರಿನ ಪ್ರಥಮ ಪ್ರಶಸ್ತಿ ನೀಡಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಈ ಸಮಾಜಕ್ಕೆ ಕೆಲಸ ಮಾಡುವ ಚಿಂತನೆ ಮಾಡಿದ್ದೇನೆ." -ಡಾ.ಬಿ.ಟಿ.ಲಲಿತಾ ನಾಯಕ್, ಪ್ರಶಸ್ತಿ ಪುರಸ್ಕೃತರು.