

ಮೂಲ್ಕಿ: ಆಧುನಿಕ ಯುಗದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ಬೆಳೆಯುವುದರ ಜತೆಗೆ ಕೌಟುಂಬಿಕ ಉನ್ನತಿಯಲ್ಲಿ ಸಮ ಪಾಲುದಾರರಾಗುತ್ತಿರುವುದು ಅಭಿನಂದನೀಯ ಎಂದು ಮೂಲ್ಕಿ ಪೊಲೀಸ್ ಉಪನಿರೀಕ್ಷಕರಾದ ಅನಿತಾ ಬಿ.ಎಚ್. ಹೇಳಿದರು.
ಮಂಗಳವಾರ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಮಹಿಳಾ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯೇ ಇದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಜಾಗೃತರಾಗಿ ಸೈಬರ್ ಕ್ರೈಂ ಅಪರಾಧಗಳನ್ನು ತಡೆಗಟ್ಟಬೇಕಾಗಿದೆ. ಮಹಿಳೆಯರು ಪ್ರಾದೇಶಿಕ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಉದ್ಘಾಟಿಸಿ, ಗ್ರಾಮೀಣ ಮಹಿಳೆಯರ ಆರ್ಥಿಕ ಹಾಗೂ ಸಾಂಸ್ಕೃತಿಕ ಸಬಲೀಕರಣಕ್ಕಾಗಿ ಪಂಚಾಯಿತಿ ವಿವಿಧ ಯೋಜನೆಗಳನ್ನು ರೂಪಿಸಿದ್ದು ಗ್ರಾಮಮಟ್ಟದಲ್ಲಿ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯ ಉಮೇಶ್ ಪೂಜಾರಿ, ಕಾರ್ಯದರ್ಶಿ ಸುಜಾತಾ, ಆರೋಗ್ಯ ಶಿಕ್ಷಣಾಧಿಕಾರಿ ಜಯಂತಿ, ಮುರಳೀಧರ ಎ., ಎಸ್.ಟಿ.ಎಸ್., ಸಮುದಾಯ ಆರೋಗ್ಯ ಅಧಿಕಾರಿ ಕೋಮಲಾ, ಪಂಚಾಯಿತಿ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.