ಬೆಂಗಳೂರು : ಜಗತ್ತಿನಲ್ಲಿ ಹೆಣ್ಣಿನ ಸ್ಥಾನ ಮತ್ತು ಜವಾಬ್ದಾರಿ ವಿಶೇಷವಾಗಿದ್ದು, ಆಕೆ ಸೃಷ್ಟಿಕರ್ತೆಯಾಗಿ ಸಮಾಜದ ಪಾಲಿಗೆ ನಂದಾದೀಪವಾಗಿದ್ದಾಳೆ ಎಂದು ಶ್ರೀವಿದ್ಯಾಲಕ್ಷ್ಮಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಂಗಳ ಸಿದ್ಧಲಿಂಗಯ್ಯ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಎಲ್ಲ ಜೀವಿಗಳನ್ನು ಪೊರೆದು ರಕ್ಷಿಸುವ ಹೆಣ್ಣು, ಸಮಾಜಕ್ಕೆ ದಾರಿದೀಪದಂತೆ ತನ್ನ ಬದುಕನ್ನು ಸವೆಸುತ್ತಾಳೆ ಎಂದು ಹಲವು ಸಾಧಕ ಮಹಿಳೆಯರ ಸಾಧನೆಗಳನ್ನು ವಿವರಿಸಿದರು.
ಶಾಲೆಯ ನಿರ್ದೇಶಕಿಯಾದ ಪಾವನ ಮಾತನಾಡಿ ಇತ್ತೀಚೆಗೆ ಮಹಿಳೆಯರಿಗೆ ಸರ್ವಿಕಲ್ ಕ್ಯಾನ್ಸರ್(ಗರ್ಭಕಂಠದ ಕ್ಯಾನ್ಸರ್) ಮಾರಕವಾಗಿ ಬಾಧಿಸುತ್ತಿದ್ದು, ಇದನ್ನು ತಡೆಗಟ್ಟುವು ಕುರಿತು ಮಾಹಿತಿಯನ್ನು ನೀಡಿದುರ. ಹೆಣ್ಣುಮಕ್ಕಳು ಸ್ವಯಂ ರಕ್ಷಣೆಗೆ ಕರಾಟೆಯನ್ನು ಕಲಿಯುವುದರ ಅಗತ್ಯವನ್ನು ತಿಳಿಸಿದರು.
ಪ್ರಾಂಶುಪಾಲ ಸಿದ್ದಲಿಂಗಯ್ಯ ಮಾತನಾಡಿ ಮಹಿಳಾ ದಿನಾಚರಣೆಯ ದಿವಸ ಮಾತ್ರ ಮಹಿಳೆಯರಿಗೆ ಗೌರವ ನೀಡುವುದಲ್ಲ. ಬದಲಾಗಿ ಜೀವನ ಪರ್ಯಂತರ ಹೆಣ್ಣುಮಕ್ಕಳಿಗೆ ಗೌರವ ಸಲ್ಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಹೆಣ್ಣು ಗಂಡಿನಲ್ಲಿರುವ ಸಮಾನತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ದೆ ಏರ್ಪಡಿಸಲಾಗಿತ್ತು. ಶಿಕ್ಷಕಿಯರು ಮತ್ತು ಮಹಿಳಾ ಪೋಷಕರಿಗೆ ಯೋಗ ಮತ್ತು ಧ್ಯಾನದ ವಿಧಗಳನ್ನು ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿದ್ದಲಿಂಗಯ್ಯ, ಶಾಲೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.