VIDEO| ಹಸಿವಿನ ವಿರುದ್ಧದ ಹೋರಾಟವನ್ನು ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡ ಚೆನ್ನೈ ಮೂಲದ ಮಹಿಳಾ ಸಾಧಕಿ

Sneha Mohandas
Published on

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಏಳು ಮಹಿಳಾ ಸಾಧಕಿಯರಿಗೆ ಪ್ರಧಾನಿ ಮೋದಿ ಅವರು ಬಿಟ್ಟುಕೊಟ್ಟಿದ್ದಾರೆ. ಸಾಧಕಿಯರ ಜೀವನದ ಹೋರಾಟ ಇತರರಿಗೆ ಮಾದರಿಯಾಗಿರಲಿದೆ ಎಂಬ ಉದ್ದೇಶದಿಂದ ಪ್ರಧಾನಿ ಈ ನಡೆಯನ್ನು ಅನುಸರಿಸಿದ್ದಾರೆ. ಹೀಗಾಗಿ ಪ್ರಧಾನಿ ಜಾಲತಾಣ ಖಾತೆಯಲ್ಲಿ ಅನುಭವ ಹಂಚಿಕೊಂಡ ಮೊದಲ ಮಹಿಳೆ ಚೆನ್ನೈ ಮೂಲದ ಸ್ನೇಹ ಮೋಹನ​ದಾಸ್​ ಆಗಿದ್ದಾರೆ.

ಅಂದಹಾಗೆ ಸ್ನೇಹ ಮೋಹನದಾಸ್​ ಫುಡ್​ಬ್ಯಾಂಕ್​ ಇಂಡಿಯಾದ ಸಂಸ್ಥಾಪಕಿಯಾಗಿದ್ದು, ಹಸಿವಿನ ವಿರುದ್ಧ ನಿರಂತರವಾಗಿ ಹೋರಾಡುತ್ತಿದ್ದಾರೆ.

ನಮಗೆ ಇಷ್ಟವಾಗಿದ್ದನ್ನು ನಾವು ಮಾಡಿದಾಗ ಸಶಕ್ತರು ಎಂಬ ಭಾವನೆ ಮೂಡುತ್ತದೆ. ಇತರೆ ನಾಗರಿಕರಿಗೂ ಇದು ಸ್ಫೂರ್ತಿಯಾಲಿ, ಅದರಲ್ಲೂ ಮಹಿಳೆಯರು ಮುಂದೆ ಬಂದು ನಮ್ಮೊಂದಿಗೆ ಕೈಜೋಡಿಸಬೇಕು. ಅವಶ್ಯಕತೆ ಇರುವವರಿಗೆ ಊಟ ನೀಡಿ ಎಂದು ನಾನು ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ. ಹಾಗೇ ಹಸಿವು ಮುಕ್ತ ಭಾರತಕ್ಕೆ ಸಹಾಯ ಮಾಡಿ ಎಂದು ಸ್ನೇಹ ಮೋಹನದಾಸ್​ ಪ್ರಧಾನಿ ಟ್ವೀಟ್​ ಮೂಲಕ ಕೋರಿದ್ದಾರೆ.

ಅನಿವಾಸಿ ಭಾರತೀಯರೊಂದಿಗೆ ಸೇರಿ ಸ್ವಯಂ ಪ್ರೇರಿತರಾಗಿ ಹಸಿವು ಮುಕ್ತ ಸಮಾಜದೆಡೆಗೆ ಹಜ್ಜೆ ಹಾಕಿದ್ದೇವೆ. ಸಾಮೂಹಿಕ ಅಡುಗೆ, ಅಡುಗೆ ಮ್ಯಾರಥಾನ್​, ಎದೆಹಾಲುಣಿಸುವುದು ಸೇರಿದಂತೆ ಅನೇಕ ಅಭಿಯಾನಗಳನ್ನು ಮಾಡುತ್ತಾ, ಹಸಿದವರಿಗೆ ಆಹಾರವನ್ನು ಹಂಚುವುದೇ ನಮ್ಮ ಕಾಯಕವಾಗಿದೆ ಎಂದು ಮೋಹನದಾಸ್​ ಪ್ರಧಾನಿ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದರೊಂದಿಗೆ ಅವರ ಸಮಾಜಸೇವೆಯ 2.37 ನಿಮಿಷದ ವಿಡಿಯೋವನ್ನು ಹಂಚಿಕೊಂಡಿದ್ದು ವೈರಲ್​ ಆಗಿದೆ. ಸಾಕಷ್ಟು ನೆಟ್ಟಿಗರು ಮೋಹನದಾಸ್​ ಸೇವೆಗೆ ತಲೆದೂಗಿದ್ದಾರೆ. ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net